ರಾಯಚೂರು: ಬೆಂಗಳೂರಿನಲ್ಲಿ ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳ ಕೆಚ್ಚಲು ಕತ್ತರಿಸಿದ್ದಾರೆ. ಇದಕ್ಕೆ ಪ್ರೇರಣೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯಬೇಕು ಎಂದು 14 ಗೋ ಶಾಲೆ ಆರಂಭಿಸಿತ್ತು. ಈ ಸರ್ಕಾರ ಸಚಿವ ಸಂಪುಟದಲ್ಲಿ ಎಲ್ಲ ಗೋಶಾಲೆಗಳನ್ನು ರದ್ದು ಮಾಡಲು ಮುಂದಾಗಿದೆ. ಗೋವಿನ ಬಗ್ಗೆ ಕಾಂಗ್ರೆಸ್ ಸರ್ಕಾರ ಕೈಕೊಂಡ ಧೋರಣೆಯೇ ಕಿಡಿಗೇಡಿಗಳಿಗೆ ಸ್ಪೂರ್ತಿ. ಗೋವನ್ನು ನಾವು ತಾಯಿ ಎಂದು ಕರೆಯುತ್ತೇವೆ. ಗೋವಿಗೆ ಈ ರೀತಿ ಮಾಡಿದ್ದರಿಂದ ಇಡೀ ಹಿಂದೂ ಸಮಾಜಕ್ಕೆ ಅಪಮಾನವಾಗಿದೆ. ಕೆಚ್ಚಲು ಕತ್ತರಿಸಿ, ಕಾಲಿಗೆ ಗಾಯ ಮಾಡಿರುವುದು ಉದ್ದೇಶ ಪೂರಕವಾಗಿ ಹಿಂದೂ ಸಮಾಜಕ್ಕೆ ಅಪಮಾನ ಮಾಡುವುದಾಗಿದೆ. ಇಂಥ ನೀಚ ಸಂಸ್ಕೃತಿ ಇವತ್ತು ರಾಜ್ಯದಲ್ಲಿ ಕಾಣುತ್ತಿದ್ದೇವೆ ಎಂದರು.
ಸಿಎಂ ಹಾಗೂ ಎಲ್ಲರೂ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಈ ಮನೋಭಾವನೆ ಹೇಗೆ ಹೋಗಬೇಕು. ಈ ಬಗ್ಗೆ ರಾಜ್ಯ ಸರ್ಕಾರವೇ ಗಮನಿಸಬೇಕು. ನಾವು ಅಧಿಕಾರದಲ್ಲಿದ್ದಾಗ ಗೋ ಹತ್ಯೆ ನಿಷೇಧ ಕಾಯ್ದೆ ತಂದಿದ್ದೆವು. ಅದರೆ, ಕಾಂಗ್ರೆಸ್ ಕಾಯ್ದೆ ರದ್ದು ಮಾಡುವ ಬಗ್ಗೆ ಚಿಂತನೆ ಮಾಡುತ್ತೇವೆ ಎನ್ನುತ್ತಿದೆ. ರಾಜ್ಯ ಸರ್ಕಾರ ಹಿಂದು ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ ಇದು ಒಳ್ಳೆಯದ್ದಲ್ಲ ಎಂದರು.
ರಾಜ್ಯದಲ್ಲಿ ಹಿಂದು ಸಮಾಜ ಎದ್ದರೆ ಏನಾಗಬಹುದು ಎನ್ನುವ ಚಿಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು. ಮುಂದೆ ಗಂಭೀರ ಗಲಭೆಗಳಾದರೆ ಸಾವು ನೋವುಗಳಾದರೆ ಕಾಂಗ್ರೆಸ್ ಸರ್ಕಾರ ಕಾರಣ ಎನ್ನುವ ಎಚ್ಚರಿಕೆ ಕೊಡುತ್ತೇನೆ ಎಂದರು.
ತಿಂಥಿಣಿ ಶ್ರೀಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪೂಜಾರಿಗಳು ಹತ್ತು ಸಾವಿರಕ್ಕೂ ಹೆಚ್ಚು ಇದಾರೆ. ಅವರಿಗೆ ಉದ್ಯೋಗ ಇಲ್ಲ, ತರಬೇತಿ ಇಲ್ಲ, ಅವರ ಮಕ್ಕಳಿಗೆ ಶಿಕ್ಷಣ ಇಲ್ಲ. ಈ ಬಗ್ಗೆ ಸಿದ್ದರಾಮಾನಂದ ಶ್ರೀಗಳು ಹೇಳುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ಬನ್ನಿ ಅಂತ ಕರೆಯಲು ಹೋಗಿದ್ದೆ. ಆಗ ಸ್ವಾಮೀಜಿ ಪೂಜಾರಿಗಳ ಮಕ್ಕಳಿಗೆ ಶಿಕ್ಷಣ, ತರಬೇತಿ ಆಗಬೇಕು ಎನ್ನುವ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಮಾಡುತ್ತೇನೆಂದು ಹೇಳಿರುವ ಸಿಎಂ ಈವರೆಗೂ ಮಾಡಿಲ್ಲ ಎಂದರು.
ಶೃಂಗೇರಿಯಲ್ಲಿ ಡಿಕೆ ಶಿವಕುಮಾರ್ ಜನರಿಗೆ ಒಂದು ಮಾತು ಹೇಳಿದ್ದಾರೆ. ಸಾಧು ಸಂತರ, ಮಠ-ಮಾನ್ಯಗಳ ಅಭಿವೃದ್ಧಿ ಆದರೆ, ಭಾರತೀಯ ಸಂಸ್ಕೃತಿ ಉಳಿಯತ್ತದೆ. ಈ ನಿಟ್ಟಿನಲ್ಲಿ ನೀವು ಪ್ರಯತ್ನ ಮಾಡಿ ಎಂದು ಜನರಿಗೆ ಹೇಳಿದ್ದಾರೆ. ಆದರೆ, ಸರ್ಕಾರ ಏನು ಮಾಡತ್ತದೆ ಎಂದು ಹೇಳಿಲ್ಲ. ಮಠಗಳಿಗೆ, ಸಾಧು ಸಂತರಿಗೆ ಅಭಿವೃದ್ಧಿಗೆ ಹಣ ಕೊಡುವ ತೀರ್ಮಾನ ಮಾಡಲಿ. ಬಜೆಟ್ನಲ್ಲಿ ಇಷ್ಟು ಹಣ ಕೊಡ್ತಿವಿ ಅಂತ ಡಿಕೆಶಿ ಘೋಷಣೆ ಮಾಡಲಿ. ಅದನ್ನು ಬಿಟ್ಟು ಜನರಿಗೆ ಸಂಸ್ಕಾರ ಬರುತ್ತದೆ ಎಂದು ಭಾಷಣ ಹೊಡೆದರೆ ಅದರಿಂದ ಲಾಭ ಏನು ಎಂದು ಪ್ರಶ್ನಿಸಿದರು.