ಅಳ್ನಾವರ: ಪಟ್ಟಣದ ಜನತೆಗೆ ಬೇಸಿಗೆಯಲ್ಲಿ ಕುಡಿವ ನೀರಿನ ತೊಂದರೆ ಆಗದ ಹಾಗೆ ನೋಡಿಕೊಳ್ಳಲು ಶುಕ್ರವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ನೀರು ಸರಬರಾಜು ವಿಭಾಗದ ಅಧಿಕಾರಿ ದೀಪಕ ಕಿತ್ತೂರ ಮಾತನಾಡಿ, ಸದ್ಯ ಕುಡಿಯುವ ನೀರಿನ ಮೂಲವಾದ ಡೌಗಿ ನಾಲಾ ಹಳ್ಳದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದೆ. ಇನ್ನೂ 45 ದಿನ ಸಾಕಾಗುವಷ್ಟು ನೀರು ಇದೆ. ಸಮೀಪದ ಹೂಲಿಕೇರಿ ಕೆರೆಯ ನೀರಿನ ಹರಿವು ನಿರಂತರ ಬರುತ್ತಿದೆ.
ಬಾಳಗುಂದ ಭಾಗದಿಂದ ಕೂಡಾ ನೀರಿನ ಹರಿವು ಇದೆ. ಮುಂಜಾಗೃತಾ ಕ್ರಮವಾಗಿ ಬೋರ್‌ವೆಲ್‌ಗಳನ್ನು ದುರಸ್ತಿ ಮಾಡಿಸಿಟ್ಟುಕೊಳ್ಳಲಾಗುವುದು ಎಂದರು. ಮುಂದಿನ ಸಭೆಯಲ್ಲಿ ಆಗಿನ ಪರಿಸ್ಥಿತಿ ಅವಲೋಕಿಸಿ ಕ್ರಮ ಜರುಗಿಸಲು ಸಭೆ ನಿರ್ಣಯಿಸಿತು. ಕರ್ನಾಟಕ ಜಲ ಮಂಡಳಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ರವಿಕುಮಾರ ಮಾತನಾಡಿ, ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾದ ಕಾಳಿ ನದಿಯಿಂದ ನೀರು ತರುವ ಯೋಜನೆ ಕಾಮಗಾರಿ ಭರದಿಂದ ನಡೆದಿದೆ. ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಮೂಲಕ ಜನರಿಗೆ ಶುದ್ಧ ನೀರು ನೀಡುವ ಉದ್ದೇಶ ಇದೆ.
ಜಾವಳ್ಳಿಯಲ್ಲಿ ನಿರ್ಮಿಸುತ್ತಿರುವ ನೀರು ಶುದ್ಧೀಕರಣ ಘಟಕ ಆಧುನಿಕ ಪದ್ಧತಿಯಲ್ಲಿ ನಿರ್ಮಾಣ ಆಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ. ಜಾಕ್ ವೆಲ್ ಕಾಮಗಾರಿ, ಪೈಪ್‌ಲೈನ್ ಅಳವಡಿಕೆ ಕಾರ್ಯ ಹಾಗೂ ನಲ್ಲಿಗಳ ಜೋಡಣೆ ಮುಕ್ತಾಯದ ಹಂತದಲ್ಲಿದೆ. ಪೈಪ್‌ಲೈನ್ ಅಳವಡಿಕೆಗೆ ಅಗೆದಿರುವ ರಸ್ತೆ ದುರಸ್ತಿ ಕೆಲಸ ಕೈಗೊಳ್ಳಲಾಗುವುದು ಎಂದರು.
ಕಾಳಿ ನದಿಯಿಂದ ನೀರು ತರುವ ಯೋಜನೆಯ ಕಾಮಗಾರಿ ಸದ್ಯದ ಪರಿಸ್ಥಿತಿ ನೋಡಲು ಜ. 6ರಂದು ಕಾಮಗಾರಿ ಸ್ಥಳಕ್ಕೆ ಪಟ್ಟಣ ಪಂಚಾಯ್ತಿ ಸರ್ವ ಸದಸ್ಯರು, ಅಧಿಕಾರಿಗಳ ನಿಯೋಗ ತೆರಳಲು ತೀರ್ಮಾನಿಸಲಾಯಿತು. ಕಟ್ಟಿಗೆ ನಾಡಿಗೆ ಸ್ವಾಗತ ಎಂದು ಸೂಚಿಸುವ ನಾಮಫಲಕ ಅಳವಡಿಕೆ, ನೀರು ಶುದ್ಧೀಕರಣ ಘಟಕಗಳ ನಿರ್ವಹಣೆ, ಆಜಾದ್ ರಸ್ತೆಯಲ್ಲಿ ನಿತ್ಯ ನಡೆಯುವ ತರಕಾರಿ ಮಾರುಕಟ್ಟೆಯನ್ನು ಪಟ್ಟಣ ಪಂಚಾಯ್ತಿ ಹಳೆಯ ಕಟ್ಟಡ ತೆರವು ಮಾಡಿದ ಜಾಗೆಗೆ ಸ್ಥಳಾಂತರ, ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ, ಮಾಂಸ ವ್ಯಾಪಾರ ಮಾಡಲು ಲೈಸೆನ್ಸ್ ನೀಡುವ ವಿಚಾರ, 15ನೇ ಹಣಕಾಸು ಯೋಜನೆಯಡಿ ಕರೆಯಲಾದ ಟೆಂಡರ್ ಕಾಮಗಾರಿ ಮಂಜೂರಿ ನೀಡುವ ಬಗ್ಗೆ ಚರ್ಚಿಸಲಾಯಿತು.
ಅಧ್ಯಕ್ಷೆ ಮಂಗಳಾ ರವಳಪ್ಪನವರ, ಉಪಾಧ್ಯಕ್ಷ ನದೀಮ ಕಾಂಟ್ರಾಕ್ಟರ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಯಲಕಪಾಟಿ, ಸದಸ್ಯರಾದ ಜೈಲಾನಿ ಸುದರ್ಜಿ, ಕೇಶವ ಗುಂಜೀಕರ, ಮಧು ಬಡಸ್ಕರ್, ಛಗನಲಾಲ ಪಟೇಲ, ರಮೇಶ ಕುನ್ನೂರಕರ, ತಮೀಮ ತೇರಗಾಂವ, ಯಲ್ಲಾರಿ ಹುಬ್ಲೀಕರ, ಯಲ್ಲಪ್ಪ ಹೂಲಿ, ನೇತ್ರಾವತಿ ಕಡಕೋಳ, ರೇಶ್ಮಿ ತೇಗೂರ, ಶಾಲೆಟ್ ಬೆರೆಟ್ಟೊ, ಭಾಗ್ಯವತಿ ಕುರುಬರ, ಸುನಂದಾ ಕಲ್ಲು ಹಾಗೂ ನಾಮ ನಿರ್ದೇಶನ ಸದಸ್ಯರಾದ ಪ್ರತಾಪ ಕಲಾಲ, ಅಶೋಕ ಬರಗುಂಡಿ, ಅನ್ನಪೂರ್ಣಾ ಕೌಜಲಗಿ, ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ನಾಗರಾಜ ಗುರ್ಲಹೂಸುರ ಮುಂತಾದವರು ಉಪಸ್ಥಿತರಿದ್ದರು.