ದೇವನಹಳ್ಳಿ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕ್ರಮವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋವಿಡ್ ದೊಂದಿಗೆ ಸಾಂಕ್ರಾಮಿಕರೋಗಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಜಿಪಂ ಪ್ರಭಾರ ಅಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಪಂ ಕಚೇರಿಯ ಅಧ್ಯಕ್ಷರ ಕೊಠಡಿಯಲ್ಲಿ ಆದಿಜಾಂಬವ ಸೇವಾ ಟ್ರಸ್ಟ್ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸ್ವಚ್ಛೋತ್ಸವ-ನಿತ್ಯೋತ್ಸವ ಕಾರ್ಯಕ್ರಮದಡಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಇನ್ನುಮುಂದೆ ಕೊರೊನಾದೊಂದಿಗೆ ಜೀವನ ಸಾಗಿಸಬೇಕಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಿಪಂ ಪ್ರಭಾರಿ ಅಧ್ಯಕ್ಷ ಸ್ಥಾನ ದೊರೆತಿದೆ. ಪಕ್ಷದ ಮುಖಂಡರ ನಂಬಿಕೆ ಹುಸಿಗೊಳಿಸದೆ, ಕಡಿಮೆ ಅವಧಿಯಲ್ಲಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಜಿಲ್ಲಾಡಳಿತ ಭವನದ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಸಾಕಷ್ಟು ಬಾರಿ ಜಿಪಂ ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗುವುದು ಎಂದರು.
ಜಿಪಂ ಉಪಾಧ್ಯಕ್ಷೆಯಾಗಿ ನನ್ನ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ಇದರೊಂದಿಗೆ ಪ್ರಭಾರಿ ಅಧ್ಯಕ್ಷ ಸ್ಥಾನ ನಿಭಾಯಿಸುತ್ತಿದ್ದೇನೆ. ಇದಕ್ಕೆ ಪಕ್ಷದ ಮುಖಂಡರ ನೆರವು ಹಾಗೂ ಜಿಪಂ ಸದಸ್ಯರ ಸಹಕಾರ ಇದೆ ಎಂದರು.
ಆದಿಜಾಂಬವ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎಂ. ಶ್ರೀನಿವಾಸ್ ಮಾತನಾಡಿ, ಜಿಪಂ ಪ್ರಭಾರ ಅಧ್ಯಕ್ಷರಾಗಿ ಕನ್ಯಾಕುಮಾರಿ ಅವರು, ಆಯ್ಕೆ ಗೊಂಡಿರುವುದು ಸಂತಸ ತಂದಿದೆ. ಇರುವ ಅಲ್ಪವಧಿಯಲ್ಲಿ ಅಭಿವೃದ್ಧಿ ಕಾರ್ಯ ಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಆದಿಜಾಂಬವ ಸೇವಾ ಟ್ರಸ್ಟ್ ಉಪಾಧ್ಯಕ್ಷ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ತಿರುಮಲೇಶ್, ಖಜಾಂಚಿ ನರಸಿಂಹಯ್ಯ, ಸಹ ಕಾರ್ಯದರ್ಶಿ ಚಂದ್ರು, ನಿರ್ದೇಶಕರಾದ ಹೊಸವುಡ್ಯ ಮುನಿರಾಜು, ಶಿವಾನಂದ್, ಹೇಮಂತ್, ಮುಖಂಡ ಶ್ರೀನಿವಾಸ್ ಇದ್ದರು.