ಕುರುಗೋಡು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ಮತ್ತು ತಾಪಂ ವತಿಯಿಂದ ಕೃಷಿ ಹೊಂಡ ಹಾಗೂ ಬದು ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಈಗಾಗಲೇ ಕೃಷಿ ಇಲಾಖೆ ವತಿಯಿಂದ ತಾಲೂಕಿನ ವ್ಯಾಪ್ತಿಯ ಸುತ್ತಮುತ್ತ ಗ್ರಾಮಗಳಲ್ಲಿ ಈ ಎರಡೇ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಏಪ್ರಿಲ್‌ನಲ್ಲಿ ಒಟ್ಟು 56 ಬದು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ 20 ಕೃಷಿ ಹೊಂಡಗಳು ಮುಕ್ತಾಯಗೊಂಡಿದೆ. ಇನ್ನುಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೆ ಬದು ನಿರ್ಮಾಣ ಮತ್ತು ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷ ತಾಲೂಕಿನಲ್ಲಿ ಕೆರೆ ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣ, ಕಾಲುವೆ ಹೂಳು ತೆಗೆಯುವ ಕೆಲಸವನ್ನೇ ಹೆಚ್ಚಾಗಿ ಕೈಗೆತ್ತಿಕೊಳ್ಳಲಾಗಿತ್ತು. ಅದರೆ ಈ ವರ್ಷ ಇವುಗಳ ಜತೆಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡಕ್ಕೆ ಒತ್ತು ನೀಡಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸುವುದು, ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎನ್ನುವ ಉದ್ದೇಶದಿಂದ ಈ ಸಲ ಬದು ನಿರ್ಮಾಣ, ಕೃಷಿ ಹೊಂಡಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಕೆರೆ ಹೂಳೆತ್ತುವುದು, ಕಾಲುವೆ ಹೂಳು ತೆಗೆಯುವುದು, ಚೆಕ್ ಡ್ಯಾಂ, ಇಂಗು ಗುಂಡಿಗಳ ನಿರ್ಮಾಣವೂ ನಡೆದಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಎಂ.ದೇವರಾಜ್ ಮತ್ತು ತಾಪಂ ಇಒ ಮಡಗಿನ ಬಸಪ್ಪ ತಿಳಿಸಿದರು.
ತಾಲೂಕಿನ ಮುಷ್ಟಗಟ್ಟೆ, ಎಚ್. ವೀರಾಪುರ, ಸೋಮಲಾಪುರ, ಒರ್ವಾಯಿ ಬಾದನಹಟ್ಟಿ, ಗ್ರಾಮಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬದುಗಳ ನಿರ್ಮಾಣ ಮತ್ತು ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಕೊರೊನಾ ವೈರಸ್ ಹಾವಳಿ ಹೆಚ್ಚಿರುವುದರಿಂದ ಅನೇಕ ಜನರು ಊರುಗಳಿಂದ ಸ್ವಗ್ರಾಮಕ್ಕೆ ವಾಪಸ್ ಬಂದಿದ್ದಾರೆ. ಅವರಿಗೂ ಕೆಲಸ ಕೊಡಲಾಗಿದೆ. ಸದ್ಯ 500 ಕೂಲಿ ಕಾರ್ಮಿಕರು ಯೋಜನೆ ಅಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಕಾರದ ನಿರ್ದೇಶನದಂತೆ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಎಲ್ಲ ಕಾರ್ಮಿಕರಿಗೂ ಇದರ ಬಗ್ಗೆ ಅಧಿ ಕಾರಿಗಳು ತಿಳಿವಳಿಕೆ ಮೂಡಿಸಿದ್ದಾರೆ. ಒಂದೊಂದು ಬದುವಿನಲ್ಲಿ
ಒಬ್ಬೊಬ್ಬರೇ ಕೆಲಸ ನಿರ್ವಹಿಸುವುದರಿಂದ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ಅನುಕೂಲವಾಗುತ್ತಿದೆ. ಹೆಚ್ಚಿನ ಬದುಗಳ ನಿರ್ಮಾಣಕ್ಕೆ ಇದು ಕೂಡ ಪ್ರಮುಖ ಅನುಕೂಲವಾಗಲಿದೆ.
ಬದು ನಿರ್ಮಾಣ ಮತ್ತು ಕೃಷಿ ಹೊಂಡ ನಿರ್ಮಾಣ ಮಾಡುವುದರಿಂದ ಮಣ್ಣು ಮತ್ತು ನೀರು ಕೊಚ್ಚಿ ಹೋಗುವುದಿಲ್ಲ. ಭೂಮಿ ಫಲವತ್ತತೆ ಹೆಚ್ಚಾಗುತ್ತದೆ. ಆದ್ದರಿಂದ
ಕೃಷಿ ಚಟುವಟಿಕೆಗೆ ಸರಕಾರ ಆದ್ಯತೆ ನೀಡಿದೆ. ಇನ್ನೂ ಲಾಕ್‌ಡೌನ್ ಅಡಿ ಕಾರ್ಮಿಕರಿಗೂ ಕೆಲಸ ನೀಡಲಾಗಿದೆ.
ಎಂ. ದೇವರಾಜ್, ಹಿರಿಯ ಕೃಷಿ ಅಧಿಕಾರಿ ಕುರುಗೋಡು
ಸುಧಾಕರ್ ಮಣ್ಣೂರು