Advertisement

ಸ್ವಚ್ಛ, ಸುಂದರ ನಗರ ನಿರ್ಮಾಣಕ್ಕೆ ಆದ್ಯತೆ

11:43 AM Dec 06, 2018 | Team Udayavani |

ಬೆಂಗಳೂರು: ಸ್ವಚ್ಛ ಹಾಗೂ ಸುಂದರ ಬೆಂಗಳೂರು ನಿರ್ಮಾಣ ನನ್ನ ಆದ್ಯತೆ. ಆ ನಿಟ್ಟಿನಲ್ಲಿ ನಗರದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಉಪಮೇಯರ್‌ ವಿ.ಭದ್ರೇಗೌಡ ತಿಳಿಸಿದರು. 

Advertisement

ಉಪಮೇಯರ್‌ ಆಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನ ಟ್ರಾಫಿಕ್‌, ಕಸದ ಸಮಸ್ಯೆಗಳ ನಿವಾರಣೆಗೆ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮೇಯರ್‌ ಜತೆ ಸೇರಿ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು. ಈ ವೇಳೆ ಪತ್ರಕರ್ತರು ಕೇಳಿದ ಕೆಲ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

* ಸಾರ್ವಜನಿಕರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೀರ?
ಜನರ ಸಮಸ್ಯೆಗಳ ನಿವಾರಣೆಗೆ ನಾನು ಸದಾ ಸಿದ್ಧ. ನನ್ನ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ಜನರಿಗೆ ನೀಡುತ್ತೇನೆ. ನಗರದ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ವಾಟ್ಸ್‌ಆ್ಯಪ್‌ ಮೂಲಕ ತಿಳಿಸಿದರೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. 

* ನೀವು ಲೆಕ್ಕಪರಿಶೋಧನೆ ವರದಿ ಮಂಡಿಸುತ್ತೀರಾ?
ಮೊದಲ ಅವಧಿಯಲ್ಲಿ ಉಪಮೇಯರ್‌ ಆಗಿದ್ದ ಹೇಮಲತಾ ಗೋಪಾಲಯ್ಯ ಅವರು ಲೆಕ್ಕಪರಿಶೋಧನಾ ವರದಿ ಮಂಡಿಸಿದ್ದರು. ಆದರೆ, ಅದರಲ್ಲಿ ಕೆಲವು ಲೋಪಗಳಿದ್ದರಿಂದ ಅಂಗೀಕರಿಸಿರಲಿಲ್ಲ. ಮೇಯರ್‌ ಹಾಗೂ ಆಯುಕ್ತರೊಂದಿಗೆ ಸಾಧಕ-ಬಾಧಕಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

* ಎಂಟು ತಿಂಗಳಲ್ಲಿ ನಗರದ ಜನರು ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?
ಸರ್ಕಾರ ಹಾಗೂ ಪಾಲಿಕೆಯ ಅನುದಾನದಲ್ಲಿ ಈಗಾಗಲೇ ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ. ಅವುಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು. ಜತೆಗೆ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು. ಜತೆಗೆ 198 ವಾರ್ಡ್‌ಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮಕೈಗೊಳ್ಳಲಾಗುವುದು.

Advertisement

* ತೆರಿಗೆ ಸಂಗ್ರಹ ಹೆಚ್ಚಿಸಲು ನಿಮ್ಮ ಮುಂದಿರುವ ಯೋಜನೆಗಳೇನು?
ಈಗಾಗಲೇ ಮೇಯರ್‌ ಗಂಗಾಂಬಿಕೆಯವರು ಆಸ್ತಿ ತೆರಿಗೆ ಸಂಗ್ರಹದ ಕುರಿತು ವಲಯವಾರು ಸಭೆಗಳನ್ನು ನಡೆಸುತ್ತಿದ್ದು, ಅವರೊಂದಿಗೆ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next