Advertisement

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ

11:24 AM Jun 19, 2018 | Team Udayavani |

ನಾಯಕನಹಟ್ಟಿ: ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಲಾಗುವುದು ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಹೇಳಿದರು.

Advertisement

ತಳಕು ಗ್ರಾಮದಲ್ಲಿ ಜನಸಂಪರ್ಕ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಇದ್ದ ಹಳ್ಳಿಗಳನ್ನು ಗುರುತಿಸಿದರೆ ಅಲ್ಲಿ ಕೊಳವೆಬಾವಿ ಕೊರೆಯಿಸಲಾಗುವುದು.

ಈಗಾಗಲೇ ಯರ್ರೇನಹಳ್ಳಿ  ಗ್ರಾಮದಲ್ಲಿ ಬೋರ್‌ ವೆಲ್‌ ಕೊರೆಯಿಸಲಾಗುತ್ತಿದೆ. ದೇವಾಲಯ, ಶಾಲೆ ಸೇರಿದಂತೆ ಜಲ ಸಂಪನ್ಮೂಲ ಯಾವುದೇ ಪ್ರದೇಶದಲ್ಲಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ
ಮನೆಯಲ್ಲಿ ನೀರು ಇಲ್ಲವಾದರೆ ಯಾವುದೇ ಕಾರ್ಯಗಳು ಸಾಧ್ಯವಿಲ್ಲ. ಹೀಗಾಗಿ ಕುಡಿಯುವ ನೀರಿನ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಇಲ್ಲಿನ ಪ್ರದೇಶಕ್ಕೆ ತುಂಗಭದ್ರಾ ಹಿನ್ನೀರು ಯೋಜನೆ ಜಾರಿಯಾಗಲಿದೆ. ಆದರೆ ಈ ಯೋಜನೆ ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕು. ಅಲ್ಲಿಯವರೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಅಗತ್ಯವಿರುವ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮೊಳಕಾಲ್ಮೂರು ಹಾಗೂ ತಳಕು ಗ್ರಾಮಗಳಲ್ಲಿ ಜನಸಂಪರ್ಕ ಕಚೇರಿಗಳನ್ನು ತೆರೆಯಲಾಗಿದೆ. ಇಲ್ಲಿ ಜನರು ತಮ್ಮ ಅಹವಾಲು, ಸಮಸ್ಯೆಗಳ ಅರ್ಜಿಗಳನ್ನು ನೀಡಬಹುದಾಗಿದೆ. ಸರ್ಕಾರದ ಯೋಜನೆಗಳು ಸೇರಿದಂತೆ ಯಾವುದೇ
ಸಮಸ್ಯೆಗಳಿದ್ದರೂ ಜನಸಂಪರ್ಕ ಕಚೇರಿಯಲ್ಲಿ ನೀಡಬೇಕು. ಇಲ್ಲಿನ ಕಚೇರಿಯಲ್ಲಿ ಕಂಪ್ಯೂಟರ್‌ ವ್ಯವಸ್ಥೆ ಮಾಡಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಲ್ಲಿನ ಜನರಿಗೆ ಶಾಶ್ವತ ನೀರಿನ ಸಮಸ್ಯೆಯಿದೆ. ಇದರ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುವುದು ಎಂದರು.

Advertisement

ಮುಖಂಡ ಟಿ. ನಾಗರಾಜ್‌ ಅವರ ನಿವಾಸವನ್ನು ಜನಸಂಪರ್ಕ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ನೂತನ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿ ಉದ್ಘಾಟಿಸಲಾಯಿತು. ಬಳ್ಳಾರಿಯ ಮಾಜಿ ಸಂಸದೆ ಜೆ. ಶಾಂತಾ, ಬಿಜೆಪಿ ಮಂಡಲಾಧ್ಯಕ್ಷ ಎಂ.ವೈ.ಟಿ. ಸ್ವಾಮಿ, ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ವೆಂಕಟಸ್ವಾಮಿ, ಮಾಜಿ ಕ್ಷೇತ್ರಾಧ್ಯಕ್ಷ ಆರ್‌ .ಜಿ. ಗಂಗಾಧರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮುಖಂಡರಾದ ಟಿ. ನಾಗರಾಜ,
ಎಚ್‌.ಟಿ. ನಾಗಿರೆಡ್ಡಿ, ಶ್ರೀರಾಮ ರೆಡ್ಡಿ, ತಿಪ್ಪೇಸ್ವಾಮಿ, ಪಿ. ಶಿವಣ್ಣ, ಸಿ.ಬಿ. ಮೋಹನ್‌, ಪಿ.ಬಿ. ತಿಪ್ಪೇಸ್ವಾಮಿ
ಇತರರು ಇದ್ದರು.

ನಾನು ಕ್ಷೇತ್ರದ ಜನರಿಗೆ ಸಿಗುವುದಿಲ್ಲ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಚುನಾವಣೆಯಲ್ಲಿ ಗೆಲುವು         ಸಾಧಿಸಿದ ನಂತರ ಹಲವಾರು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ.

ಬಿ. ಶ್ರೀರಾಮುಲು, ಮೊಳಕಾಲ್ಮೂರು ಶಾಸಕ 

Advertisement

Udayavani is now on Telegram. Click here to join our channel and stay updated with the latest news.

Next