Advertisement

ಸ್ವಚ್ಛತೆಗೆ ಆದ್ಯತೆ ನೀಡಿ ಪೌಷ್ಟಿಕ ಆಹಾರ ಸೇವಿಸಿ

12:53 PM Oct 21, 2017 | Team Udayavani |

ಹುಣಸೂರು: ಹೆಣ್ಣು ಮಕ್ಕಳು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕಲ್ಕುಣಿಕೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮತಾ ಸಲಹೆ ನೀಡಿದರು. ನಗರದದ ಡಿ.ದೇವರಾಜೆ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಘಟಕದ ವತಿಯಿಂದ ಆಯೋಜಿಸಿದ್ದ ಮಹಿಳೆ ಮತ್ತು ಆರೋಗ್ಯ ಸಮಸ್ಯೆಗಳು ಕುರಿತಾದ ಉಪನ್ಯಾಸದಲ್ಲಿ ಮಾತನಾಡಿದರು.

Advertisement

ಯುವತಿಯರು, ಮಹಿಳೆಯರಲ್ಲಿ ಋತುಚಕ್ರ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಈ ವೇಳೆ ಹೊಟ್ಟೆನೋವು, ತಲೆನೋವು ಸಾಮಾನ್ಯ. ಇದಕ್ಕಾಗಿ ಮಾತ್ರೆ ತೆಗೆದುಕೊಳ್ಳುವುದು ಬೇಡ. ಮೂಢನಂಬಿಕೆ ಬಿಟ್ಟು ಶುಚಿತ್ವಕ್ಕೆ ಹೆಚ್ಚು ಗಮನ ನೀಡಬೇಕು. ಆದಷ್ಟು ಜಂಕ್‌ಫ‌ುಡ್‌ಗಳನ್ನು ತಿನ್ನಬಾರದು. ನಿತ್ಯ ಪೌಷ್ಟಿಕ ಆಹಾರ ಸೇವಿಸುವುದರಿಂದ ರಕ್ತ ಹೀನತೆ ತಪ್ಪಿಸಬಹುದು ಎಂದು ಸಲಹೆ ನೀಡಿದರು.

ಕಾಯಿಲೆಗಳು ಬಂದ ನಂತರ ಔಷಧೋಪಚಾರಕ್ಕಾಗಿ ಪರದಾಡುವ ಬದಲು ಕಾಯಿಲೆ ಬಾರದಂತೆ ಮುಂಜಾಗ್ರತೆ ವಹಿಸುವುದು ಅಗತ್ಯ. ನಿತ್ಯ ಎಳನೀರು, ಆಗಾಗ್ಗೆ ನೀರು ಕುಡಿಯುತ್ತಿರಬೇಕು. ಹದಿಹರೆಯದ ವಯಸ್ಸಿನಲ್ಲಿ ಮುಖದಲ್ಲಿ ಗುಳ್ಳೆಗಳು(ಮೊಡವೆ) ಬರುವುದು ಸಾಮಾನ್ಯ. ಸೌಂದರ್ಯಕ್ಕಾಗಿ ಯಾವುದೋ ಕ್ರೀಮ್‌ ಹಚ್ಚಬೇಡಿ, ಇದರಲ್ಲಿ ಸ್ಟಿರಾಯಿಡ್‌ ಅಂಶವಿದ್ದು ಚರ್ಮಕ್ಕೆ ಹಾನಿಕಾರಕವೆಂದು ಎಚ್ಚರಿಸಿದರು.

ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಇಂದಿನ ಆಹಾರ ಪದ್ಧತಿ ಹಾಗೂ ದೈಹಿಕ ಮತ್ತು ಮಾನಸಿಕ ಅಸಮತೋಲನದಿಂದಾಗಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಪೌಷ್ಟಿಕಾಂಶ ಕೊರತೆಯೂ ಕಾಡುತ್ತಿದೆ. ಇದು ವಿದ್ಯಾರ್ಥಿಗಳ ಓದಿನ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದರು.

ವೇದಿಕೆಯಲ್ಲಿ ಎನ್‌ಎಸ್‌ಎಸ್‌ ಸಂಚಾಲಕರಾದ ಡಾ.ಸಿ.ಆರ್‌.ಕಿರಣ್‌ಕುಮಾರ್‌, ಜಿ.ವಿಜಯಲಕ್ಷಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ್‌, ಆರೋಗ್ಯ ನಿರೀಕ್ಷಕ ಮುತ್ತು, ಅರುಳಪ್ಪ, ಅರುಣ್‌, ಮಮತಾ, ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿನಿಯರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next