ವಿಜಯಪುರ: ಮಕ್ಕಳ ಪೋಷಣೆ ಮತ್ತು ಗುಣಾತ್ಮಕ ಶಿಕ್ಷಣ ಒದಗಿಸುವ ಕಾರ್ಯದಲ್ಲಿ ಪೋಷಕರು ವಿಶೇಷ ಮುತುವರ್ಜಿ ವಹಿಸಬೇಕು. ಕಾಲಕಾಲಕ್ಕೆ ಮಕ್ಕಳಿಗೆ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಖ್ಯಾತ ಮನೋವೈದ್ಯ ಡಾ.ಕಿಶೋರ್ ತಿಳಿಸಿದರು.
ಪಟ್ಟಣದ ವಿಜಯಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮದೃಷ್ಟಿ ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂಡಲ, ವಿಜಯಾ ವಿದ್ಯಾದತ್ತಿಗಳ ಸಂಯುಕ್ತ ಆಶ್ರಯದಲ್ಲಿ ಮಾನಸಿಕ ನಿರ್ವಹಣೆ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಮತ್ತು ಕೌಟುಂಬಿಕ ಆಪ್ತ ಸಮಾಲೋಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೌವನಾವಸ್ಥೆಯಲ್ಲಾಗುವ ಬದಲಾವಣೆ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಎದುರಾದಾಗ ಮಕ್ಕಳು ಅನುಭವಿಸುವ ಮಾನಸಿಕ ಸಂದಿಗ್ಧತೆಯನ್ನು ನಿವಾರಿಸಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಜೀವನಶೈಲಿಯಲ್ಲಿ ಮೂಲ ಸಂಸ್ಕೃತಿಯನ್ನು ಅನುಕರಣೆ ಮಾಡುವುದು, ಸೂಕ್ತ ಆಹಾರ ಪದ್ಧತಿಯ ಅನುಸರಣೆ, ಅನಗತ್ಯವಾಗಿ ಅಧಿಕ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮೊರೆಹೋಗುವುದನ್ನು ನಿಷೇಧಿಸುವುದರ ಬಗ್ಗೆ ಹೊಣೆಗಾರಿಕೆ ತೀರಾ ಅಗತ್ಯವೆಂದು ಹೇಳಿದರು.
ಜಿಲ್ಲಾ ಸಕ್ಷಮ ಕಾರ್ಯದರ್ಶಿ ಬಿ.ಎಂ.ಜಗದೀಶ್‌ಕುಮಾರ್ ಮಾತನಾಡಿ, ಒಬ್ಬಂಟಿತನ ಕಾಡದಂತೆ ಮಕ್ಕಳನ್ನು ನೋಡಿಕೊಳ್ಳಬೇಕು. ಎಲ್ಲವನ್ನೂ ಸಕಾರಾತ್ಮಕವಾಗಿ ಚಿಂತಿಸುವ, ಸದಾ ಕ್ರಿಯಾಶೀಲರಾಗಿರುವಂತೆ ಜವಾಬ್ದಾರಿ ನೀಡಬೇಕು ಎಂದರು.
ವಿಜಯಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ನಾಗೇಶ್, ಸಕ್ಷಮ ಉಪಾಧ್ಯಕ್ಷ ಉಮೇಶ್, ಸದಸ್ಯ ಚಂದನ್, ಬ್ಯಾಟರಾಜು, ರವಿ, ವಂದನಾ ಜಗದೀಶ್ ಮತ್ತಿತರರು ಭಾಗವಹಿಸಿದ್ದರು. ಇದೇ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಆಪ್ತ ಸಮಾಲೋಚನೆ ನಡೆಸಲಾಯಿತು.