Advertisement

ಕುಡಿವ ನೀರಿಗೆ ಖಾಸಗಿ ಕೊಳವೆ ಬಾವಿಗೆ ಆದ್ಯತೆ ಕೊಡಿ

09:29 PM Mar 11, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರಗಾಲದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳ ವರೆಗೂ ಖಾಸಗಿ ಟ್ಯಾಂಕರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರಿನ ಸರಬರಾಜು ಮಾಡಿ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಜಿಪಂ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅನಗತ್ಯವಾಗಿ ಕೊಳವೆ ಬಾವಿಗಳನ್ನು ಕೊರೆಸುವುದರ ಬದಲು ಖಾಸಗಿ ಕೊಳವೆ ಬಾವಿಗಳ ಮೂಲಕ ಜನತೆಗೆ ಕುಡಿಯುವ ನೀರು ಕಲ್ಪಿಸುವಂತೆ ಆದೇಶಿಸಿದರು.

ಟ್ಯಾಂಕರ್‌ ಮೂಲಕ ನೀರು: ಬರಗಾಲದ ಸಮಯದಲ್ಲಿ ಜನಸಾಮಾನ್ಯರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯ ಎಂದ ಅವರು, ಮುಂದಿನ ದಿನಗಳಲ್ಲಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದರೇ, ಬರಗಾಲದ ಹಿನ್ನೆಲೆಯಲ್ಲಿ ಅಂತಹ ಘಟಕಗಳಲ್ಲಿ 2 ತಿಂಗಳ ಮಟ್ಟಿಗೆ ಪ್ರತಿ ಕ್ಯಾನ್‌ ನೀರಿಗೆ 2 ರೂ., ಹೆಚ್ಚಳ ಮಾಡಿ ಜಿಪಂ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

ಕೊರೊನಾ ಯಾರು ಆತಂಕ ಪಡಬೇಡಿ: ವ್ಯಾಪಕ ಚರ್ಚೆಗೆ ಗುರಿಯಾಗಿರುವ ಕೊರೊನಾ ವೈರಸ್‌ ಬಗ್ಗೆ ಯಾರು ಆತಂಕಕ್ಕೊಳಗಾಗುವುದು ಬೇಡ. ಬೀದಿಬದಿಗಳಲ್ಲಿ ಮಾರಾಟವಾಗುವ ತಿಂಡಿ-ತಿನಿಸುಗಳ ಸೇವನೆ ಕಡಿಮೆ ಮಾಡಬೇಕು. ಬೇಸಿಗೆ ಕಾಲದಲ್ಲಿ ಬೀಸಿಲಿನ ತಾಪ ಜಾಸ್ತಿಯಾಗುವ ಹಿನ್ನೆಲೆಯಲ್ಲಿ ಕಾಲರಾ ಸೇರಿದಂತೆ ಮತ್ತಿತರ ಕಾಯಿಲೆಗಳು ಕಂಡುಬರುತ್ತದೆ. ಇದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಆರೋಗ್ಯಾಧಿಕಾರಿಗಳಿಗೆ ಜಿಪಂ ಅಧ್ಯಕ್ಷರು ಸೂಚಿಸಿದರು.

ಜಿಪಂ ವತಿಯಿಂದ ಬಿಡುಗಡೆಗೊಳಿಸಿರುವ ಅನುದಾನವನ್ನು ಅಧಿಕಾರಿಗಳು ಪ್ರಗತಿ ಕಾಮಗಾರಿಗಳಿಗೆ ಸದ್ಬಳಕೆ ಮಾಡಿ ಕೊಳ್ಳದೆ ಸರ್ಕಾರಕ್ಕೆ ವಾಪಾಸ್‌ ಕಳುಹಿಸುವುದು ಬೇಡ. ಸರ್ಕಾರದ ಅನುದಾನವನ್ನು ವರ್ಷಾಂತ್ಯದಲ್ಲಿ ಸಂಪೂರ್ಣವಾಗಿ ವಿನಿಯೋಗಿಸಬೇಕು.

Advertisement

ನೂತನ ಗೋದಾಮು: ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಮಾತನಾಡಿ, ಜಿಪಂ ಅನುದಾನದಲ್ಲಿ ವಿವಿಧ ತಾಲೂಕುಗಳಲ್ಲಿ ನೂತನ ಗೋದಾಮುಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯಲ್ಲಿ ಪೂರ್ಣ ವಾಗಿದೆ. ಇನ್ನುಳಿದ ಚಿಂತಾಮಣಿ, ಗುಡಿಬಂಡೆ ಹಾಗೂ ಮಂಡಿಕಲ್ಲು ಹೋಬಳಿಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ತಾಲೂಕಿಗೊಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಬಿ.ಎಂ.ಯೋಗೇಶ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೊಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲಾ ಪಂಚಾಯತ್‌ ವತಿಯಿಂದ ಅನುದಾನವನ್ನು ನಗರಗೆರೆ, ದಿಬ್ಬೂರು, ಪಾತಪಾಳ್ಯ, ಜಂಗಮಕೋಟೆ, ಮುರುಗಮಲ್ಲ ಮತ್ತು ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಜಿಪಂ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ಸಿಇಒ ಬಿ. ಫೌಜಿಯಾ ತರನ್ನುಮ್‌, ಯೋಜನಾ ನಿರ್ದೇಶಕ‌ ಮಾಧುರಾವ್‌ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 106ಕ್ಕೇರಿದ ನೀರಿನ ಸಮಸ್ಯಾತ್ಮಕ ಗ್ರಾಮಗಳು: ಜಿಪಂ ಸಭಾಗಂಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪನಿರ್ದೇಶಕ‌ ಶಿವಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಈಗ 106 ಸಮಸ್ಯಾತ್ಮಕ ಗ್ರಾಮಗಳಿವೆ. ಇದರಲ್ಲಿ 32 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, 74 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಯಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಅವಶ್ಯಕತೆಯಿಲ್ಲದ ಕಡೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯುವುದು ಬೇಡ. ಇದರಿಂದ ಹಳೆಯ ಕೊಳವೆಬಾವಿಗಳಿಗೆ ಅಂತರ್ಜಲದ ಮಟ್ಟ ಕಡಿಮೆಯಾಗುತ್ತದೆ. ಮಳೆ ಬರುವವರೆಗೂ ಸಮಸ್ಯಾತ್ಮಕ ಗ್ರಾಮಗಳಿಗೆ ಹಾಗೂ ನಗರದ ವಾರ್ಡ್‌ಗಳಿಗೆ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರಿನ ಸರಬರಾಜು ಮಾಡಬೇಕು.
-ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next