Advertisement

ಎರಡೆರಡು ಬಾರಿ ಚೆಕ್‌ ಮಾಡಿ…

06:45 AM Nov 19, 2018 | |

ಮನೆ ಕಟ್ಟುವ ಸಂದರ್ಭದಲ್ಲಿ ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಸಾಲದು. ಪಾಯ ತೋಡುವಾಗ, ಕಂಬ ಹಾಕುವಾಗ, ಬಜೆಟ್‌ನ ಲೆಕ್ಕಾಚಾರ ಮಾಡುವಾಗ, ಪ್ರತಿಯೊಂದನ್ನೂ ಎರಡೆರಡು ಬಾರಿ ಚೆಕ್‌ ಮಾಡಿ ಆನಂತರವೇ ಮುಂದಿನ ಹೆಜ್ಜೆ ಇಡಬೇಕು. ಅದರಲ್ಲೂ, ತಳಪಾಯವೇ ಮನೆಗೆ ಆರ್ಥಿಕ ಆಗಿರುವುದರಿಂದ ಪಾಯದ ಗಟ್ಟಿತನದ ಬಗ್ಗೆ ಎರಡೆರಡು ಬಾರಿ ಚೆಕ್‌ ಮಾಡಲೇಬೇಕು. 

Advertisement

ಮನೆ ಕಟ್ಟುವಾಗ  ಕೆಲವು ಮುಖ್ಯ ವಿಷಯಗಳ ಬಗ್ಗೆ “ಸೆಕೆಂಡ್‌ ಒಪಿನಿಯನ್‌’ – ಮರು ಪರಿಶೀಲನೆ ಅಥವಾ ಮತ್ತೂಂದು ಅಭಿಪ್ರಾಯ ತೆಗೆದುಕೊಳ್ಳಬೇಕಾಗುತ್ತದೆ. ಹತ್ತಾರು ಬಾರಿ ಅದೇ ಕೆಲಸವನ್ನು ಮಾಡಿದ್ದರೂ ಕೂಡ ತಪ್ಪಾಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಸಾಮಾನ್ಯವಾಗಿ, ಅಗತ್ಯವೇ ಇಲ್ಲದಿದ್ದ ಸಂದರ್ಭದಲ್ಲೂ ಸೆಕೆಂಡ್‌ ಒಪಿನಿಯನ್‌ ತೆಗೆದುಕೊಂಡು ಸ್ಥಿತಿಗತಿಯನ್ನು ಮರು ಪರಿಶೀಲಿಸುವುದುಂಟು. ಅದೇ ರೀತಿಯಲ್ಲಿ, ಮನೆಕಟ್ಟುವ ವಿಚಾರದಲ್ಲಿ, ಗಂಭೀರ ವಿಷಯಗಳಲ್ಲಿ ಮನೆಯ ಕಟ್ಟಡದ ಬಗ್ಗೆಯೂ ಮರು ಪರಿಶೀಲಿಸಬೇಕಾಗುತ್ತದೆ. ಇತ್ತೀಚೆಗೆ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ವಾಲಿಕೊಂಡು ಕುಸಿದುಬಿದ್ದು ಸುದ್ದಿಯಾಗಿತ್ತು. ಎರಡು ಮೂರು ಅಂತಸ್ತಿನ ಕಟ್ಟಡ ಕಟ್ಟುವಂಥಹವರಿಗೆ ಸಾಕಷ್ಟು ಪರಿಣತಿ ಇದ್ದೇ ಇರುತ್ತದೆ. ಹಾಗಾದರೆ ಅವಘಡ ಹೇಗಾಯಿತು? ಎಂಬ ಪ್ರಶ್ನೆ ಸಹಜವಾಗೇ ಏಳುತ್ತದೆ. ಮನೆಗಳನ್ನು ಕಟ್ಟುವ ಯಾರಿಗಾದರೂ ಅದು ಗಟ್ಟಿಮುಟ್ಟಾಗಿ ಇರಬೇಕೆಂಬ ಆಶಯ ಇದ್ದೇ ಇರುತ್ತದೆ. ಆದರೂ, ಅವಘಡಗಳು ಆದಾಗ – ಹೇಗಾಯಿತು? ಎಲ್ಲಿ ಏನು ತಪ್ಪು ಆಗಿರಬಹುದು ಎಂದು ಚಿಂತಿಸುವಂತಾಗುತ್ತದೆ. ಹಾಗಾಗಿ, ನಾವು ಮನೆ ಕಟ್ಟುವಾಗ ಎಲ್ಲೆಲ್ಲಿ ಮರು ಪರಿಶೀಲನೆ ಮಾಡಬೇಕು ಎಂಬುದರ ಬಗ್ಗೆ ಒಂದಷ್ಟು ಚಿಂತನೆ ಮಾಡಿದರೆ ಒಳಿತು. 

ಪಾಯದ ಬಗ್ಗೆ ಹುಶಾರು 
ಮನೆಯ ಎಲ್ಲ ಕೆಲಸ ಶುರುವಾಗುವುದು ತಳಪಾಯದಿಂದಲೇ. ಸಾಮಾನ್ಯವಾಗಿ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭೂಮಿ ಸಾಕಷ್ಟು ಗಟ್ಟಿ ಇದೆ. ಅದು ಗೊತ್ತಿರುವುದರಿಂದಲೇ ಅದರ ಭಾರ ಹೊರುವ ಸಾಮರ್ಥಯದ ಬಗ್ಗೆ ನಾವ್ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಬೆಂಗಳೂರಿನಂಥ “ಗುಡ್ಡಗಾಡು’ ಪ್ರದೇಶದಲ್ಲಿ ಅಂದರೆ, ಕೆಲವೊಂದು ಸ್ಥಳದಲ್ಲಿ ಕಲ್ಲು ಕೆಲವೇ ಅಡಿಗಳ ಕೆಳಗೆ ಇದ್ದರೆ, ಇನ್ನೂ ಕೆಲವು ಸ್ಥಳಗಳಲ್ಲಿ ಮೇಲೆಯೇ ಬಂದು ಕಣ್ಣಿಗೆ ಕಾಣುತ್ತಿರುತ್ತದೆ. ಇಂಥ ಸ್ಥಳಗಳಲ್ಲಿ ನಾವು ಪಾಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಆದರೆ, ಗುಡ್ಡಗಳ ಮಧ್ಯದ ಇಳಿಜಾರಿನಲ್ಲಿ ಕೆಲವೊಮ್ಮೆ ಭರ್ತಿ ಮಾಡಲಾಗಿರುತ್ತದೆ.  ಇದರ ಮಾಹಿತಿ ಇಲ್ಲದಿದ್ದರೆ, ನೋಡಲು ಗಟ್ಟಿಮುಟ್ಟಾಗಿದೆ ಎಂದೆನಿಸಿದರೂ ಒಳಗೆ ಠುಸುಕಲಾಗಿ ಇರಬಹುದು. ಹಾಗೆ ನೋಡಿದರೆ, ನಾವು ಇಳಿಜಾರಾದ ನಿವೇಶನದ ಬಗ್ಗೆಗಿಂತ ಮಟ್ಟಸವಾಗಿ ಕಾಣುವ ಸೈಟಿನಲ್ಲಿ ಏನಾದರೂ ಭರ್ತಿ ಮಾಡಲಾಗಿದೆಯೇ? ಎಂದು ಪರಿಶೀಲಿಸುವುದು ಉತ್ತಮ. ಕಡೇಪಕ್ಷ ಇಳಿಜಾರು ನಿವೇಶನದಲ್ಲಿ ಮೂರು ನಾಲ್ಕು ಅಡಿ ಕೆಳಗೆ ಗಟ್ಟಿ ಭೂಮಿ ದೊರಕುವ ಸಾಧ್ಯತೆ ಇರುತ್ತದೆ. ಆದರೆ ಎರಡು ಗುಡ್ಡಗಳ ಮಧ್ಯ ಪ್ರದೇಶದಲ್ಲಿ ಭರ್ತಿ ಹತ್ತಾರು ಅಡಿ ಆಳ ಇರುವ ಸಾಧ್ಯತೆ ಇರುತ್ತದೆ. ಇಂಥ ಸ್ಥಳಗಳಲ್ಲಿ ಪಾಯ ಹಾಕುವಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ನೋಡಲು ಮಟ್ಟಸವಾಗಿದ್ದಷ್ಟೂ ನಾವು ಅದರ ಸಮತಟ್ಟಾದ ಮೇಲ್‌ಮೈಯ ಕೆಳಗೆ ಏನು ಇದೆ? ಎಂದು ಮರುಪರಿಶೀಲಿಸುವುದು ಉತ್ತಮ.

ಸೆಕೆಂಡ್‌ ಒಪಿನಿಯನ್‌ ಎಲ್ಲೆಲ್ಲಿ?
ನೀವು ಮನೆ ಕಟ್ಟುವಾಗ ಪಾಯ ನಾಲ್ಕು ಅಡಿ ಆಳ ಇರಲಿ ಎಂದು ನಿರ್ಧರಿಸಿ ಮಣ್ಣು ಅಗೆಯುವಾಗ ಪ್ಲಾಸ್ಟಿಕ್‌ ಚೀಲಗಳು, ಬಾಟಲ್‌ಗ‌ಳು, ಇತ್ಯಾದಿ ತ್ಯಾಜ್ಯ ಸಿಗುತ್ತಾ ಹೋದರೆ, ಪಾಯದ ಮಣ್ಣಿನ ಭಾರಹೊರುವ ಸಾಮರ್ಥ್ಯದ  ಬಗ್ಗೆ ಮರುಪರಿಶೀಲನೆ ನಡೆಸುವುದು ಅಗತ್ಯ ಆಗುತ್ತದೆ. ಹಳ್ಳಕೊಳ್ಳಗಳಲ್ಲಿ ಕೆಂಪು ಮಣ್ಣು ಇಲ್ಲವೇ ನುರುಜುಗಲ್ಲು, ಮರಳು ಮಿಶ್ರಿತ ಜೇಡಿ ಮಣ್ಣಿನ ಅಂಶ ಹೊಂದಿರುವ ಮಣ್ಣಿನಿಂದ ಭರ್ತಿ ಆಗಿದ್ದರೆ ಕೆಲವೇ ವರ್ಷಗಳಲ್ಲಿ ಗಟ್ಟಿಮುಟ್ಟಾದ ಪಾಯ ನಿರ್ಮಾಣವಾಗುವ ಸಾಧ್ಯತೆ ಇರುತ್ತದೆ. ಆದರೆ, ತಗ್ಗುಜಾಗಗಳಲ್ಲಿ ತ್ಯಾಜ್ಯವನ್ನು ಸುರಿದು, ಮೇಲೆ ಮಾತ್ರ ಒಂದೆರಡು ಅಡಿ ಒಳ್ಳೆಯ ಮಣ್ಣು ಸುರಿದಿದ್ದರೆ, ಎಷ್ಟೇ ವರ್ಷ ಸರಿದರೂ ತಳಪಾಯ ಗಟ್ಟಿಗೊಳ್ಳುವುದಿಲ್ಲ. ಅದೇ ರೀತಿ, ರಿಟೆನಿಂಗ್‌ ವಾಲ್ಸ್‌ – ತಡೆಗೋಡೆಗಳ ವಿಷಯದಲ್ಲೂ ಸಾಕಷ್ಟು ಮುಂಜಾಗರೂಕತೆ ವಹಿಸಿ ಮರುಪರಿಶೀಲನೆ ಮಾಡುವುದು ಉತ್ತಮ. ಮನೆ ಕಟ್ಟುವಾಗ ಆಗುವ ಅನೇಕ ಅವಘಡಗಳಲ್ಲಿ ಮಣ್ಣು ಕುಸಿತದಿಂದ ಆಗುವುದೇ ಹೆಚ್ಚು. ಆದುದರಿಂದ ಈ ವಿಷಯದಲ್ಲೂ ಅಂದಾಜಾಗಿ ಒಂದಷ್ಟು ದಪ್ಪದ ಗೋಡೆಕಟ್ಟಿ ಅದು ನಾಲ್ಕಾರು ಅಡಿ ಮಣ್ಣಿನ ಅಡ್ಡ ಒತ್ತಡವನ್ನು ತಡೆಯುತ್ತದೆ ಎಂದು ಸುಮ್ಮನಿರುವ ಬದಲು ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ಗಳ ಸಲಹೆ ಪಡೆದು ಮುಂದುವರೆಯುವುದು ಉತ್ತಮ.

ಪರ್ಯಾಯ ಪಾಯ ವ್ಯವಸ್ಥೆಗಳು
ಕೆಲವೊಮ್ಮೆ ನಾಲ್ಕಾರು ಅಡಿ ಕೆಳಗೆ ಅಗೆದರೂ ಗಟ್ಟಿಮಣ್ಣು ಸಿಗುವುದಿಲ್ಲ. ಅದರಲ್ಲೂ, ನೀವು ನಾಲ್ಕಾರು ಮಹಡಿ ಇರುವ ಕಟ್ಟಡ ಕಟ್ಟಬೇಕು ಎಂದಿದ್ದರೆ ಕಡ್ಡಾಯವಾಗಿ “ಪೈಲ್ಸ್‌’ ಮಾದರಿಯ ಪಾಯಕ್ಕೆ ಮೊರೆ ಹೋಗಬೇಕಾಗುತ್ತದೆ. ಇವು ಕಂಬದಂತೆಯೇ ಇದ್ದು ಪೈಲ್ಸ್‌ಗಳನ್ನು ಸಾಮಾನ್ಯವಾಗಿ ಭಾರಿ ಗಾತ್ರದ ಸುತ್ತಿಗೆಗಳಿಂದ ಹೊಡೆದು ಭೂಮಿಯೊಳಗೆ ತೂರಿಸಿ ಅದರ ಮೇಲೆ ಮನೆಗಳನ್ನು ಕಟ್ಟಲಾಗುತ್ತಿತ್ತು. ಆದರೆ. ಇತ್ತೀಚಿನ ದಿನಗಳಲ್ಲಿ ನೀರು ಪಡೆಯಲು ಬೋರ್‌ವೆಲ್‌ ಕೊರೆಸುವಂತೆ ತೂತು ಕೊರೆಸಿ, ಅದರಲ್ಲಿ ಕಂಬಗಳಿಗೆ ಕಟ್ಟುವಂತೆ ಕಂಬಿಯ ಪಂಜರ ಇಳಿಸಿ ಕಾಂಕ್ರಿಟ್‌ ಸುರಿದು. ಗಟ್ಟಿಗೊಂಡ ನಂತರ ಇದರ ಆಧಾರದ ಮೇಲೆ ಮನೆಯನ್ನು ಕಟ್ಟಲಾಗುತ್ತದೆ.

Advertisement

ಪಾಯದ ನಂತರ ಸಂಶಯ ಉಂಟಾದರೆ 
ನಾವು ಎಷ್ಟೇ ಹುಷಾರಾಗಿದ್ದರೂ ಕೆಲವೊಮ್ಮೆ ತಪ್ಪುಗಳಾಗಬಹುದು. ನಾಲ್ಕು ಮಾಡಿ ಕಟ್ಟಡಕ್ಕೆ ಕೇವಲ ಎರಡು ಮಹಡಿಯಿಂದ ಬರುವ ಭಾರವನ್ನು ಪರಿಗಣಿಸಿ ಪಾಯ ವಿನ್ಯಾಸ ಮಾಡಿರಬಹುದು! ಇಲ್ಲವೇ ಭೂಮಿ ಅಷ್ಟೇನೂ ಗಟ್ಟಿ ಇಲ್ಲ ಎಂದು ತಿಳಿದಿದ್ದರೂ ಪ್ರತಿ ಚದುರ ಅಡಿಗೆ ಕೇವಲ ಒಂದು ಟನ್‌ ಭಾರ ಹೊರುವ ಸಾಮರ್ಥ್ಯ ಎಂದು ಲೆಕ್ಕದಲ್ಲಿ ಪರಿಗಣಿಸುವ ಬದಲು ಎರಡು ಟನ್‌ ಎಂದು ಗುಣಿಸಿದ್ದಿರಬಹುದು. ಹೀಗೆ ಮಾಡಿದಾಗ ನಮ್ಮ ಪಾಯದ ಭಾರ ಹೊರುವ ಸಾಮರ್ಥ್ಯ ಅರ್ಧಕ್ಕೆ ಇಳಿದಿರುತ್ತದೆ. ಈ ಅಂಶ ಮೊದಲ ಮಹಡಿ ಕಟ್ಟುವಾಗ ಗಮನಕ್ಕೆ ಬಂದಿರಬಹುದು. ಅಂಥ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಇರುವ ಪಾಯವನ್ನು ಮತ್ತಷ್ಟು ಬಲಪಡಿಸಲು ಚಿಂತಿಸಬೇಕಾಗುತ್ತದೆ. 

ಪಾಯಗಳ ಮಧ್ಯೆ ಮತ್ತೂಂದು ಪಾಯ
ಕಂಬಗಳು ತೀರ ದೂರ ಇದ್ದಾಗ, ಫ‌ುಟಿಂಗ್‌ ವಿಸ್ತಾರವಾಗಿ ಇರದಿದ್ದರೆ,  ಪಾಯದ ಕೆಳಗಿನ ಮಣ್ಣಿನ ಮೇಲೆ ಹೆಚ್ಚುವರಿ ಭಾರ ಬೀಳುತ್ತದೆ. ಇಂಥ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಕಂಬಗಳ ಮಧ್ಯೆ ಮತ್ತೂಂದು ವರಸೆ ಕಂಬಗಳನ್ನು ಹೊಂದಿಸುವ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸಬೇಕಾಗುತ್ತದೆ. ಹೀಗೆ ಮಧ್ಯಂತರದಲ್ಲಿ ಬರುವ ಕಂಬಗಳಿಗೆ ಹೆಚ್ಚುವರಿ ಪಾಯ ಹಾಕಿದರೆ, ಈಗಾಗಲೇ ಹಾಕಿರುವ ಪಾಯದ ಮೇಲೆ ಭಾರ ಕಡಿಮೆ ಆಗಿ, ಮನೆ ಕುಸಿಯುವ ಸಾಧ್ಯತೆ ಇರುವುದಿಲ್ಲ. ಎರಡು ಮೂರು ಮಹಡಿಗಳು ಮಾತ್ರ ಇದ್ದು, ಒಂದು ಮಹಡಿಯ ಭಾರವನ್ನು ಕಂಬದ ಪಾಯದಿಂದ ಬೇರ್ಪಡಿಸಬೇಕು ಎಂದಿದ್ದರೆ, ನೆಲಮಹಡಿಗೆ ಮಾಮೂಲಿ ಸೈಝುಕಲ್ಲು ಪಾಯವನ್ನು ಹಾಕಬಹುದು. ಆಗ ನೆಲಮಹಡಿಯ ಭಾರ ಪ್ಲಿಂತ್‌ ಬೀಮ್‌ನ ಮೂಲಕ ಕಂಬಗಳ ಮೇಲೆ ಬೀಳದೆ ಸೈಝುಕಲ್ಲಿನ ಪಾಯದ ಮೇಲೆಯೇ ಬೀಳುತ್ತದೆ. 

ಕೆಲವೊಮ್ಮೆ ಕ್ಯಾಲುಕಲೇಟರ್‌ ಕೈಕೊಡುವುದುಂಟು. ಕಂಪ್ಯೂಟರ್‌ಗೂ ಸಹ ತಪ್ಪು ಮಾಹಿತಿ ಒಳಹೋಗಿಸಿದರೆ, ಮತ್ತಷ್ಟು ತಪ್ಪು ಹೊತ್ತು ಅದೇ ಮಾತಿ ಹೊರಬರುತ್ತದೆ. ಹಾಗಾಗಿ ಮುಖ್ಯ ಕಾರ್ಯಗಳಿಗೆ ಒಮ್ಮೆ “ಬಾಯಿಲೆಕ್ಕ’ ಪ್ರಕಾರ ಅಂದಾಜಾಗಿ ಭಾರಹೊರುವ ಸಾಮರ್ಥ್ಯವನ್ನು, ವಿವಿಧ ಭಾಗಗಳ ಬಲಾಬಲಗಳನ್ನು ಮರುಪರಿಶೀಲಿಸಿ ದೃಢಮಾಡಿಕೊಳ್ಳುವುದು ಉತ್ತಮ. 

ಹೆಚ್ಚಿನ ಮಾತಿಗೆ ಫೋನ್‌ 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next