Advertisement

ಚುನಾವಣಾ ಪೂರ್ವ: ಮೀಸಲಾತಿ ಪ್ರಕಟ

09:55 AM Sep 05, 2018 | |

ಮಹಾನಗರ: ಮಹಾನಗರ ಪಾಲಿಕೆ ಚುನಾವಣೆಗೆ ಕೆಲವು ತಿಂಗಳು ಬಾಕಿಯಿರುವಂತೆಯೇ ಮೇಯರ್‌, ಉಪ ಮೇಯರ್‌ ಮೀಸಲಾತಿ ಪ್ರಕಟಗೊಂಡಿದೆ. ಮೀಸಲಾತಿಯಂತೆ ಈ ಬಾರಿಯ ಮೇಯರ್‌ ಸ್ಥಾನ ಹಿಂದುಳಿದ ವರ್ಗ ‘ಎ’ ಹಾಗೂ ಉಪಮೇಯರ್‌ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿದೆ. ಈ ಮೂಲಕ ಮುಂದಿನ ಮೇಯರ್‌, ಉಪಮೇಯರ್‌ ಪದವಿ ಯಾವ ವರ್ಗದ ಪಾಲಾಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳ ಒಂದಷ್ಟು ಆಕಾಂಕ್ಷಿಗಳಲ್ಲಿ ಚುನಾವಣಾ ಪೂರ್ವದಲ್ಲೇ ನಿರೀಕ್ಷೆಗಳನ್ನು ಗರಿಗೆದರಿದೆ. 

Advertisement

ರೊಟೇಶನ್‌ ಆಧಾರದಲ್ಲಿ ಮೀಸಲಾತಿಯನ್ನು ಸರಕಾರ ನಿಗದಿಪಡಿಸಿದೆ. ಚುನಾವಣೆಗೆ 6 ತಿಂಗಳ ಮೊದಲೇ ಮೇಯರ್‌, ಉಪಮೇಯರ್‌ ಪದವಿಗೆ ಮೀಸಲಾತಿ ನಿಗದಿಪಡಿಸಬೇಕು ಎಂಬ ನಿಯಮ ಇದ್ದರೂ ಬಹುತೇಕ ಸಂದರ್ಭ ಗಳಲ್ಲಿ ಚುನಾವಣೆ ನಡೆದ ಬಳಿಕವೇ ಮೀಸಲಾತಿ ಪ್ರಕಟಗೊಂಡಿದೆ. ಹಿಂದುಳಿದ ವರ್ಗ ಎ ಯಲ್ಲಿ ಬಂಟರು ಹಾಗೂ ಜೈನ್‌ ಸಮುದಾಯವನ್ನು ಹೊರತು ಪಡಿಸಿ ಮುಸ್ಲಿಂ, ಬಿಲ್ಲವ, ಕುಲಾಲ, ಮಡಿವಾಳ, ದೇವಾಡಿಗ, ಸವಿತಾ ಸಮಾಜ ಸೇರಿದಂತೆ ಬಹುತೇಕ ಜಾತಿಗಳು ಬರುತ್ತವೆ. ಸಾಮಾನ್ಯ ಮಹಿಳೆ ವರ್ಗದಲ್ಲಿ ಎಲ್ಲರೂ ಅರ್ಹರಾಗುತ್ತಾರೆ.

ಹಿಂದಿನ ಅವಧಿಗಳಲ್ಲಿ ಪಾಲಿಕೆ ಚುನಾವಣೆ ನಡೆದ ಬಳಿಕ ಮೇಯರ್‌, ಉಪ ಮೇಯರ್‌ ಪದವಿಗೆ ಮೀಸಲಾತಿ ಪ್ರಕಟಗೊಂಡಿತ್ತು. ಬಳಿಕ ಬಹುಮತ ಪಡೆದ ಪಕ್ಷದಲ್ಲಿ ಮೇಯರ್‌, ಉಪ ಮೇಯರ್‌ ಹುದ್ದೆಗಳಿಗೆ ಆಕಾಂಕ್ಷಿಗಳಿಂದ ಪೈಪೋಟಿ ಆರಂಭವಾಗಿತ್ತು. ಮೀಸಲಾತಿಯ ಪರಿಣಾಮದಿಂದ ಈ ಹುದ್ದೆಗಳಿಗೆ ಅವಕಾಶ ವಂಚಿತರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಲೇರಿದ್ದು, ಇದರಿಂದ ಆಯ್ಕೆ ಪ್ರಕ್ರಿಯೆಗಳು ಕೂಡ ವಿಳಂಬವಾದುದ್ದು ಇದೆ. ಆದರೆ ಈ ಬಾರಿ ಚುನಾವಣಾ ಪೂರ್ವದಲ್ಲೇ ಈ ಪದವಿಗಳಿಗೆ ಮೀಸಲಾತಿ ಪ್ರಕಟಗೊಂಡಿರುವುದರಿಂದ ಮೀಸಲಾತಿ ಕುರಿತಂತೆ ಅಸ್ಪಷ್ಟತೆ ನಿವಾರಣೆಯಾಗಿದೆ.

5 ವರ್ಷಗಳ ಮೀಸಲಾತಿ
ಮನಪಾದ ಈ ಬಾರಿಯ ಪ್ರಥಮ ವರ್ಷದ ಮೇಯರ್‌ ಗಾದಿ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್‌ ಸಾœನ ಮಹಿಳಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 2ನೇ ವರ್ಷದ ಮೇಯರ್‌ ಗಾದಿ ಮಹಿಳಾ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್‌ ಸಾœನ ಸಾಮಾನ್ಯ ವರ್ಗಕ್ಕೆ ಹಾಗೂ 3 ನೇ ವರ್ಷದ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮೇಯರ್‌ ಸ್ಥಾನ ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಮೀಸಲಾಗಿತ್ತು. 4ನೇ ಅವಧಿಯ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆ, ಉಪಮೇಯರ್‌ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ 5ನೇ ವರ್ಷದ ಮೇಯರ್‌ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್‌ ಹಿಂದುಳಿದ ವರ್ಗ ಮೀಸಲಾಗಿತ್ತು. ಈ ಅವಧಿಗಳಲ್ಲಿ ಮೇಯರ್‌ ಸ್ಥಾನ ಹಿಂದುಳಿದ ವರ್ಗ ‘ಎ’ ಮೀಸಲಾತಿ ದೊರಕಿರಲಿಲ್ಲ.

ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು 1984-85ರಿಂದ 2018ರ ವರೆಗೆ ಒಟ್ಟು 31 ಮೇಯರ್‌ ಹಾಗೂ ಉಪಮೇಯರ್‌ ಗಳನ್ನು ಕಂಡಿದೆ. ಸದಾಶಿವ ಭಂಡಾರಿ ಅವರು ಪ್ರಥಮ ಮೇಯರ್‌ ಆಗಿ ಆಯ್ಕೆಯಾದರು. ಈವರೆಗೆ ಪುರುಷರು 24 ಬಾರಿ ಹಾಗೂ ಮಹಿಳೆಯರು 7 ಬಾರಿ ಮೇಯರ್‌ ಆಗಿದ್ದಾರೆ. ಇದರಲ್ಲಿ ರಜನಿ ದುಗ್ಗಣ (ಬಿಜೆಪಿ) ಅವರನ್ನು ಹೊರತುಪಡಿಸಿ ಇತರ ಎಲ್ಲರೂ ಕಾಂಗ್ರೆಸ್‌ ಪಕ್ಷದವರು. 8 ಬಾರಿ ಅಲ್ಪಸಂಖ್ಯಾಕರು (4 ಬಾರಿ ಮುಸ್ಲಿಂ ಸಮುದಾಯ ಹಾಗೂ 4 ಬಾರಿ ಕ್ರಿಶ್ಚಿಯನ್‌ ಸಮುದಾಯ ) ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.  

Advertisement

ಒಂದು ವರ್ಷ ಗ್ರೇಸ್‌ ಅವಧಿ
ಕಳೆದ ಬಾರಿಯ ಮಹಾನಗರ ಪಾಲಿಕೆ ಚುನಾವಣೆ 2013ರ ಮಾ. 7ರಂದು ಜರಗಿತ್ತು. ನಿಯಮಗಳ ಪ್ರಕಾರ ಪರಿಷತ್‌ ಅಸ್ತಿತ್ವಕ್ಕೆ ಬಂದ ದಿನದಿಂದ 5 ವರ್ಷಗಳ ವರೆಗೆ ಚುನಾಯಿತ ಸದಸ್ಯರ ಅಧಿಕಾರಾವಧಿ ಇರುತ್ತದೆ. ಇದರಂತೆ 2018ರ ಮಾರ್ಚ್‌ನಲ್ಲಿ ಚುನಾವಣೆ ನಡೆಯ ಬೇಕಾಗಿತ್ತು. ಆದರೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ಅರ್ಜಿ ದಾಖಲುಗೊಂಡ ಹಿನ್ನೆಲೆಯಲ್ಲಿ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ಬಂದು ಒಂದು ವರ್ಷ ವಿಳಂಬವಾಗಿತ್ತು. ಅಂತಿಮವಾಗಿ ಸಾಮಾನ್ಯವರ್ಗಕ್ಕೆ ವರ್ಗಾವಣೆಯಾಗುವುದರೊಂದಿಗೆ ಕಾನೂನು ಸಮರ ಅಂತ್ಯಗೊಂಡಿತು. 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next