ಬೆಂಗಳೂರು: ಪೌರ ಕಾರ್ಮಿಕರಿಗೆ ವೇತನ ಪಾವತಿ ಹಾಗೂ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸದಿದ್ದರೆ ಸೋಮವಾರದಿಂದ ಕಸ ವಿಲೇವಾರಿ ಸ್ಥಗಿತಗೊಳಿಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಶನಿವಾರದಿಂದಲೇ ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.
ನಗರದ ಹಲವಾರು ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡು, ಕಸದ ರಾಶಿ ಸೃಷ್ಟಿಯಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಮಳೆಯೂ ಪ್ರಾರಂಭವಾಗಿರುವುದರಿಂದ ತ್ಯಾಜ್ಯ ರಸ್ತೆಯಲ್ಲಿ ಹರಡಿ ದುರ್ವಾಸನೆಯೂ ಬರುವಂತಾಗಿದೆ.
ಪಾಲಿಕೆಯ ವ್ಯಾಪ್ತಿಯ ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ರಸೆಲ್ ಮಾರುಕಟ್ಟೆ, ಫ್ರೆàಜರ್ ಟೌನ್, ಜಯನಗರ 4ನೇಬ್ಲಾಕ್, ಟ್ಯಾನರಿ ರಸ್ತೆ, ಜಯನಗರ 9ನೇ ಬ್ಲಾಕ್, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಭಾಗಗಳಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ.
ಜತೆಗೆ ಕೆಲವೊಂದು ಬಡಾವಣೆಗಳಲ್ಲಿಯೂ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕಸದ ಗುಡ್ಡೆಗಳು ನಿರ್ಮಾಣವಾಗಿವೆ. ಶನಿವಾರ ಕೇಂದ್ರ ಭಾಗದೆಲ್ಲೆಡೆ ತ್ಯಾಜ್ಯ ರಾಶಿ ಕಂಡುಬಂದಿದ್ದು, ರಜೆ ದಿನವಾದ ಭಾನುವಾರ ಹೆಚ್ಚಿನ ಪೌರಕಾರ್ಮಿಕರು ಸ್ವತ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳದ ಹಿನ್ನೆಲೆಯಲ್ಲಿ ಸೋಮವಾರದ ವೇಳೆಗೆ ತ್ಯಾಜ್ಯ ಸಮಸ್ಯೆ ಹೆಚ್ಚಲಿದ್ದು,
ಸೋಮವಾರ ಗುತ್ತಿಗೆದಾರು ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದರೆ ತ್ಯಾಜ್ಯ ಸಮಸ್ಯೆ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ. ನಗರದಲ್ಲಿ ಸೃಷ್ಟಿಯಾಗುತ್ತಿರುವ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಗುತ್ತಿಗೆದಾರರ ಮುಷ್ಕರ ತಡೆಯಲು ಪಾಲಿಕೆಯ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳದಿದ್ದರೆ, ಮತ್ತೂಮ್ಮೆ ಬೆಂಗಳೂರು ಗಾಬೇìಜ್ ಸಿಟಿ ಎಂಬ ಅಪಖ್ಯಾತಿಗೆ ಒಳಗಾಗುವ ಆತಂಕ ಎದುರಾಗಿದೆ.
ಸಂಧಾನ ಸಭೆ: ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಮಣ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು,
ಪ್ರತಿಭಟನೆ ಕೈಬಿಡುವಂತೆ ಕೋರಿದ್ದಾರೆ. ಜತೆಗೆ ಸೋಮವಾರ 11 ಗಂಟೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಗುತ್ತಿಗೆದಾರರು ಸಚಿವ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳನ್ನು ಆಧರಿಸಿ ಪ್ರತಿಭಟನೆ ಕೈಬಿಡುವುದಾಗಿ ತಿಳಿಸಿದ್ದಾರೆ.