ವಾಷಿಂಗ್ಟನ್: ಅಮೆರಿಕದ ರಾಜಧಾನಿಯಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ “ವಿಶ್ವ ಸಾಂಸ್ಕೃತಿಕ ಉತ್ಸವ’ ಎರಡನೇ ದಿನವೂ ಯಶಸ್ವಿಯಾಗಿದೆ. 180 ರಾಷ್ಟ್ರಗಳ ಪ್ರತಿನಿಧಿಗಳು ಶ್ರೀ ರವಿಶಂಕರ್ ಗುರೂಜಿ ಅವರ ಸಮ್ಮುಖದಲ್ಲಿ ಉಕ್ರೇನ್ ಶಾಂತಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಶ್ವ ಕುಟುಂಬದ ಧ್ಯೇಯವನ್ನು ಸಾರ್ಥಕಗೊಳಿಸಿದ್ದಾರೆ.
ಲಿಂಕನ್ ಸ್ಮಾರಕದ ಎದುರು ಗುರೂಜಿ ಅವರ ನೇತೃತ್ವದಲ್ಲಿ ಧ್ಯಾನ ಮತ್ತು ಯೋಗಾಭ್ಯಾಸ ನೆರವೇರಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ವಿವಿಧ ದೇಶಗಳು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದ್ದು, ಉಕ್ರೇನ್‌ನ ಖ್ಯಾತ ಸಂಗೀತಗಾರ ಒಲೇನಾ ಅಸ್ತಶೇವರಾ ಅವರು ಉಕ್ರೇನ್ ಪಾರಂಪರಿಕ ಗೀತೆಯನ್ನು ಹಾಡಿದರು.
ಈ ವೇಳೆ ಸಭೆಯಲ್ಲಿ ನೆರೆದಿದ್ದ ಜಾಗತಿಕ ರಾಷ್ಟ್ರಗಳ ಪ್ರತಿನಿಧಿಗಳೆಲ್ಲರೂ ಉಕ್ರೇನ್‌ನಲ್ಲಿನ ಸಂಘರ್ಷ ಕೊನೆಗೊಂಡು ಶಾಂತಿ ನೆಲೆಸಲಿ ಎಂದು ಗುರೂಜಿ ಅವರ ಸಮ್ಮುಖದಲ್ಲಿ ಪ್ರಾರ್ಥಿಸಿದ್ದು, ಇದು ವಿಶ್ವವನ್ನು ಒಗ್ಗೂಡಿಸಲು ಹೊರಟಿರುವ ಭಾರತದ ಸಂಕಲ್ಪ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿವಿಧ ದೇಶಗಳ ಗಣ್ಯರು ಬಣ್ಣಿಸಿದ್ದಾರೆ.
ಪರ್ವತ ಶ್ರೇಣಿಗಳ ತಪ್ಪಲು, ಕರಾವಳಿ ಬಯಲು, ಮರುಭೂಮಿ, ನದಿ ತೀರ ಹೀಗೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದ ಜನರು ಇಲ್ಲಿ ಒಗ್ಗೂಡಿದ್ದಾರೆ.ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ರವಿಶಂಕರ್ ಗುರೂಜಿ ಪುಟ್ಟ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.
– ರಾಮನಾಥ ಕೋವಿಂದ್, ಭಾರತದ ಮಾಜಿ ರಾಷ್ಟ್ರಪತಿ