ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ಪ್ರವೀರ್ ಶೆಟ್ಟಿ ಅಭಿನಯದ ಚೊಚ್ಚಲ ಚಿತ್ರಕ್ಕೆ “ಸೈರನ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ “ಸೈರನ್’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಯಿತು. ನಟ ಚಿಕ್ಕಣ್ಣ, ನಿರ್ಮಾಪಕ ಲಹರಿ ವೇಲು, ಉಮಾಪತಿ ಗೌಡ, ಪಳನಿ ಪ್ರಕಾಶ್, ಪತ್ರಕರ್ತ ರಂಗನಾಥ್ ಭಾರದ್ವಾಜ್, ಶಿವಾನಂದ ಶೆಟ್ಟಿ, ಶರತ್ ಚಂದ್ರ ಸಾನಿಲ್, ಮುರಳೀಧರ ಹೆಗ್ಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.
“ಡೆಕ್ಕನ್ ಕಿಂಗ್’ ಬ್ಯಾನರ್‌ನಲ್ಲಿ ಬಿಜು ಶಿವಾನಂದ್ ನಿರ್ಮಿಸುತ್ತಿರುವ, ಸಸ್ಪೆನ್ಸ್ ಕಂ ಆ್ಯಕ್ಷನ್ ಕ್ರೈಂ-ಥ್ರಿಲ್ಲರ್ ಕಥಾಹಂದರದ “ಸೈರನ್’ ಚಿತ್ರಕ್ಕೆ ರಾಜ ವೆಂಕಯ್ಯ ನಿರ್ದೇಶನವಿದೆ.
ಚಿತ್ರದಲ್ಲಿ ಪ್ರವೀರ್ ಶೆಟ್ಟಿಗೆ ಮಲೆಯಾಳಿ ಬೆಡಗಿ ಲಾಸ್ಯ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಪವಿತ್ರಾ ಲೋಕೇಶ್, ಸ್ಪರ್ಶ ರೇಖಾ, ಸುಕನ್ಯಾ, ಸಾಯಿ ದೀನಾ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ನಲ್ಲೂ ಇಂತಹ ಪಕ್ಷಪಾತ ನಡೆಯುತ್ತಿತ್ತು: ಹಾಕಿ ಮೋಸದಾಟಕ್ಕೆ ಸೆಹವಾಗ್ ಕಿಡಿ
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಾಜ ವೆಂಕಯ್ಯ, “ಕಳೆದ 20 ವರ್ಷಗಳಿಂದ ಛಾಯಾಗ್ರಹಕನಾಗಿ, ಸಂಕಲನಕಾರನಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ನಿರ್ದೇಶನದ ಮೊದಲ ಸಿನಿಮಾ. ಇದೊಂದು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಈಗಾಗಲೇ ಮುಕ್ಕಾಲು ಭಾಗ ಸಿನಿಮಾದ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಚೆನ್ನಾಗಿ ಬರುತ್ತಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ಪ್ರವೀರ್ ಶೆಟ್ಟಿ, “ಸಿನಿಮಾದ ಕಥೆ ಚೆನ್ನಾಗಿದ್ದ ಕಾರಣ ಈ ಸಿನಿಮಾ ಒಪ್ಪಿಕೊಂಡೆ. ಸಿನಿಮಾ ಚೆನ್ನಾಗಿ ಮೂಡಿಬರುತ್ತಿದ್ದು, ಆಡಿಯನ್ಸ್‌ಗೆ ಇಷ್ಟವಾಗುವಂತ ಒಂದೊಳ್ಳೆ ಸಿನಿಮಾ ಇದಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಚಿತ್ರದ ನಾಯಕಿ ಲಾಸ್ಯ, ನಟಿ ಸುಕನ್ಯಾ, ಛಾಯಾಗ್ರಹಕ ನಾಗೇಶ್ ಆಚಾರ್ಯ ಸೇರಿದಂತೆ “ಸೈರನ್’ ಚಿತ್ರದ ಪ್ರಮುಖ ಕಲಾವಿದರು, ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು. ಸದ್ಯ ಬಿಡುಗಡೆಯಾಗಿರುವ “ಸೈರನ್’ ಚಿತ್ರದ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.