ಬೆಂಗಳೂರು: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಕಿರಣ್ ಈ ಹಿಂದೆಯೂ ಪ್ರಕರಣವೊಂದರಲ್ಲಿ ಪೊಲೀಸರ ಅತಿಥಿಯಾಗಿದ್ದ ಎಂದು ವರದಿಯಾಗಿದೆ.
ಈ ಹಿಂದೆ 2017ರಲ್ಲಿ ಡಕಾಯತಿಗೆ ಸಂಚು ರೂಪಿಸಿದ್ದ ಆರೋಪದಡಿ ಕೋಣನಕುಂಟೆ ಪೊಲೀಸರು ಕಿರಣ್ ನನ್ನು ಬಂಧಿಸಿದ್ದರು. ಬಳಿಕ ಜೈಲಿನಿಂದ ಹೊರಬಂದಿದ್ದ ಕಿರಣ್ ಕಳೆದ ನಾಲ್ಕು ವರ್ಷಗಳಿಂದ ಕಾರು ಚಾಲಕನಾಗಿ ದುಡಿಯುತ್ತಿದ್ದ.
ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಕಿರಣ್ ಸ್ವಭಾವಕ್ಕೆ ಆಗಾಗ ಪ್ರತಿಮಾ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ಕಚೇರಿಯ ಮಾಹಿತಿಯನ್ನು ಬೇರೆಯವರಿಗೆ ನೀಡುತ್ತಿದ್ದ ಕಾರಣ ಆತನನ್ನು ಎರಡು ತಿಂಗಳ ಹಿಂದೆ ಪ್ರತಿಮಾ ಕೆಲಸದಿಂದ ತೆಗೆದು ಹಾಕಿದ್ದರು.
ಕೆಲಸ ಹೋದ ಕಾರಣ ಕಿರಣ್ ಹೆಂಡತಿ ಅವನನ್ನು ತೊರೆದು ತವರು ಮನೆಗೆ ಹೋಗಿದ್ದಳು. ಕೆಲಸ ಕಳೆದುಕೊಂಡ ಮತ್ತು ಹೆಂಡತಿ ಬಿಟ್ಟುಹೋದ ಹತಾಶೆಯಲ್ಲಿದ್ದ ಕಿರಣ್ ಮತ್ತೆ ತನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಪ್ರತಿಮಾ ಬಳಿ ಕೇಳಿದ್ದ. ಆದರೆ ಪ್ರತಿಮಾ ನಿರಾಕರಿಸಿದ್ದರು. ನಂತರ ಕಿರಣ್ ನವೆಂಬರ್ 3 ರಂದು ಪ್ರತಿಮಾರನ್ನು ಅವರ ಮನೆಯಲ್ಲಿ ಭೇಟಿ ಮಾಡಲು ಪ್ರಯತ್ನಿಸಿದ್ದಾನೆ ಆದರೆ ಸಾಧ್ಯವಾಗಿಲ್ಲ. ಶನಿವಾರದಂದು ಪ್ರತಿಮಾ ಮನೆಗೆ ಬರುವುದನ್ನು ಕಾಯುತ್ತಿದ್ದ ಕಿರಣ್ ಮನೆಯೊಳಗೆ ನುಗ್ಗಿ ಅವರ ದುಪ್ಪಟ್ಟಾದಿಂದ ಕತ್ತು ಹಿಸುಕಿದ್ದಾನೆ. ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿ ಕಿರಣ್ ನನ್ನು ನವೆಂಬರ್ 15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.