ಮೈಸೂರು: ಗುಂಬಜ್ ಒಡೆದರೆ ಟಿಪ್ಪು ಅನುಯಾಯಿಗಳಿಗೆ ಕಿರುಕುಳ ಆಗುತ್ತದೆ. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಅನ್ನಿಸುವುದಿಲ್ಲ. ರಾಮದಾಸ್ ಅವರು ಯಾವ ಅರ್ಥದಲ್ಲಿ ತಮಗೆ ಕಿರುಕುಳ ಆಗಿದೆ ಎಂದು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ದಯಮಾಡಿ ನನ್ನನ್ನು ಬಿಟ್ಟುಬಿಡಿ ಎಂಬ ಶಾಸಕ ರಾಮದಾಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮದಾಸ್ ನಮ್ಮ ಹಿರಿಯ ನೇತಾರರು. ರಾಮದಾಸ್ ಹಿಂದೆ ಕಾಂಗ್ರೆಸ್ ನವರು ಆಗಿದ್ದರು ಕೂಡ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಬಿಜೆಪಿ ಆಗಿದ್ದಾರೆ. ಪ್ರಧಾನಿ ಮೋದಿ ಅವರಿಂದಲೇ ಬೆನ್ನಿಗೆ ಗುದ್ದು ಕೊಡಿಸಿಕೊಂಡ ರಾಮದಾಸ್ ಅವರಿಗೆ ಕಿರುಕುಳ ಕೊಡವ ಶಕ್ತಿ ನನಗೆ ಎಲ್ಲಿದೆ ಹೇಳಿ ಎಂದರು.
ಮೈಸೂರಿನ ರಾಜಕಾರಣಿಗಳ ಬಳಿ ನನ್ನನ್ನೇ ಸುಟ್ಟು ಹಾಕುವಷ್ಟು ಹಣವಿದೆ. ಅವರಿಗೆ ಕಿರುಕುಳ ಕೊಡುವಷ್ಟು ಶಕ್ತಿವಂತ ನಾನಲ್ಲ. ಏನು ಕಿರುಕುಳ ಎಂಬುದನ್ನು ರಾಮದಾಸ್ ಅವರ ಬಳಿಯೆ ಕೇಳಬೇಕು. ನಾನು ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಮೈಸೂರಿನ ರಾಜಕಾರಣಿಗಳ ಜೊತೆ ಸೇರಿಕೊಂಡು ವ್ಯವಹಾರ ಮಾಡುವ ಅವಶ್ಯಕತೆ ಇಲ್ಲ. ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:”ದಯಮಾಡಿ ನನ್ನನ್ನು ಬಿಟ್ಟುಬಿಡಿ..”: ಕೈ ಮುಗಿದು ಕೇಳಿದ ಶಾಸಕ ರಾಮದಾಸ್
ನಾನು ಅಂದು ಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನು ಬದಲಾಯಿಸುತ್ತೇನೆ ಎಂದು ಹೇಳಿ ಬದಲಾಯಿಸಿದ್ದೇನೆ. ಮಹಿಷ ದಸರಾ ನಿಲ್ಲಿಸಿದ್ದೇನೆ. ಗುಂಬಜ್ ವಿಚಾರದಲ್ಲೂ ನನ್ನ ಮಾತಿಗೆ ಬದ್ಧ. ಬಸ್ ನಿಲ್ದಾಣದ ಮೇಲಿನ ಅನಧಿಕೃತ ಗುಂಬಜ್ ಅನಧಿಕೃತ ತೆರವು ಮಾಡಲೇ ಬೇಕು. ಮೈಸೂರಿನ ಅಭಿವೃದ್ಧಿ ಕಾರ್ಯಗಳು ಮಹಾರಾಜರ ಹೆಸರು ಹೇಳಬೇಕೆ ವಿನಹ ಅವರ ಶತೃುಗಳ ಹೆಸರು ಹೇಳಬಾರದು ಎಂದು ಪ್ರತಾಪ್ ಸಿಂಹ ಹೇಳಿದರು.
ರಾತ್ರಿ ಯಾಕೆ ಬಸ್ ನಿಲ್ದಾಣದ ಕೆಲಸ ಮಾಡಬೇಕು? ರಾತ್ರಿ ಕೆಲಸ ಮಾಡುವುದು ಕಳ್ಳರು. ಬಸ್ ನಿಲ್ದಾಣಕ್ಕೆ ಹೆಸರಿಡಲು ಕಾನೂನಿದೆ. ರಾತ್ರೋರಾತ್ರಿ ಹೇಗೆ ಹೆಸರಿಟ್ಟರು. ಈ ವಿಚಾರದಲ್ಲಿ ಎಲ್ಲಾ ಕಾನೂನು ಉಲ್ಲಂಘನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದೆ. ಅವರೇ ಅನಧಿಕೃತ ಕಟ್ಟಡ ಎಂದು ಹೇಳಿದ್ದಾರೆ. ಅವರು ತೆರವು ಮಾಡಬಹುದು. ಮೂಲ ವಿನ್ಯಾಸದಲ್ಲಿ ಗುಂಬಜ್ ಇಲ್ಲ. ಹೊಸ ವಿನ್ಯಾಸದಲ್ಲಿ ಗುಂಬಜ್ ಇದೆ. ಆ ನಕ್ಷೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಹಿ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.