ಹೊಸದಿಲ್ಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ತಮಗೆ ಕಾಂಗ್ರೆಸ್ ಪಕ್ಷ ನೀಡಿದ್ದ ಆಫರ್ ನ್ನು ತಿರಸ್ಕರಿಸಿದ್ದಾರೆ. ತಾವು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ಅವರು ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಮುಖಂಡರನ್ನು ಅದರಲ್ಲೂ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹಲವು ಬಾರಿ ಭೇಟಿಯಾಗಿ 2024ರ ಲೋಕಸಭೆ ಚುನಾವಣೆಗೆ ನೀಲನಕ್ಷೆ ಸಿದ್ದಪಡಿಸಿ ಚರ್ಚೆ ನಡೆಸಿದ್ದರು. ಈ ಬೆಳವಣಿಗೆಗಳು ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆಂಬ ಕೂಗಿಗೆ ಮತ್ತಷ್ಟು ಪುಷ್ಠಿ ನೀಡಿದ್ದವು.
ಪ್ರಶಾಂತ್ ಕಿಶೋರ್ ನೀಡಿದ್ದ ಹಲವು ಅಂಶಗಳ ಬಗ್ಗೆ ಚರ್ಚೆ ನಡೆಸಲು ಸೋನಿಯಾ ಗಾಂಧಿ ಎಂಟು ಮಂದಿ ಸದಸ್ಯರ ತಂಡವನ್ನು ರಚಿಸಿದ್ದರು.
ಇದನ್ನೂ ಓದಿ:ಪಾಕಿಸ್ತಾನ: ಕರಾಚಿ ಯೂನಿರ್ವಸಿಟಿ ಆವರಣದಲ್ಲಿ ಸ್ಫೋಟ, ನಾಲ್ವರು ಸಾವು, ಹಲವರು ಗಂಭೀರ
ಪ್ರಶಾಂತ್ ಕಿಶೋರ್ ಜೊತೆಗಿನ ಚರ್ಚೆಗಳ ಬಳಿಕ ಅಧ್ಯಕ್ಷರು ಸಶಕ್ತ ಕ್ರಿಯಾ ತಂಡ -2024ನ್ನು ರಚಿಸಿ, ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಗುಂಪಿನ ಭಾಗವಾಗಿ ಪಕ್ಷಕ್ಕೆ ಸೇರಲು ಅವರನ್ನು ಆಹ್ವಾನಿಸಿದರು. ಆದರೆ ಪ್ರಶಾಂತ್ ಇದನ್ನು ತಿರಸ್ಕರಿಸಿದ್ದಾರೆ. ಅವರ ಸಲಹೆಗಳಿಗೆ ಧನ್ಯವಾದಗಳು ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
“ಇಎಜಿ (ಎಂಪವರ್ಡ್ ಆಕ್ಷನ್ ಗ್ರೂಪ್) ಯ ಭಾಗವಾಗಿ ಪಕ್ಷಕ್ಕೆ ಸೇರಲು ಮತ್ತು ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕಾಂಗ್ರೆಸ್ ನ ಪ್ರಸ್ತಾಪವನ್ನು ನಾನು ನಿರಾಕರಿಸಿದೆ. ನನ್ನ ಅಭಿಪ್ರಾಯದಲ್ಲಿ, ನನಗಿಂತ ಹೆಚ್ಚಾಗಿ, ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಪಕ್ಷಕ್ಕೆ ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ” ಎಂದು ಪ್ರಶಾಂತ್ ಕಿಶೋರ್ ಹೇಳಿಕೊಂಡಿದ್ದಾರೆ.