ಹೊಳೆನರಸೀಪುರ: ಪಟ್ಟಣದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮಹಾರಥೋತ್ಸವದಲ್ಲಿ ಭಕ್ತರಿಗೆ ಪ್ರಸಾದ ಹಂಚಿಕೆ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ಗುಂಪುಗಳ ನಡುವೆ ತಿಕ್ಕಾಟ ನಡೆದಿದ್ದು, ಪೊಲೀಸರು ಹಾಗೂ ತಾಲೂಕು ಆಡಳಿತ ಮಧ್ಯೆ ಪ್ರವೇಶಿಸಿದ ಘಟನೆ ಸೋಮವಾರ ನಡೆದಿದೆ.
ಪ್ರತಿವರ್ಷ ರಥೋತ್ಸವದಂದು ದೇವಾಲಯದ ಪ್ರಾಂಗಣದಲ್ಲಿ ಅನ್ನ ಪ್ರಸಾದ ನಡೆಯುತ್ತಿತ್ತು. ಈ ವರ್ಷ ಸ್ಥಳೀಯ ಕಾಂಗ್ರೆಸ್ ಮುಖಂಡರು ತಾಲೂಕು ಆಡಳಿತಕ್ಕೆ ಲಿಖೀತ ಪತ್ರದ ಮೂಲಕ ತಮಗೂ ಪ್ರಸಾದ ವಿನಿಯೋಗ ಮಾಡಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೆಂದು ಹೇಳಲಾಗಿದೆ. ಹತ್ತಾರು ವರ್ಷಗಳಿಂದ ಮಾಜಿ ಪ್ರಧಾನಿ ಕುಟುಂಬದವರೇ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸುತ್ತಾ ಬಂದಿದ್ದಾರೆ.
ಪ್ರಸಾದ ನೀಡಿಕೆ ಗೊಂದಲ ಸೋಮವಾರ ಬೆಳಗ್ಗೆ ವಿಕೋಪಕ್ಕೆ ತಿರುಗಿತು. ಪ್ರಸಾದ ತಯಾರಿಕೆಗೆ ಬೇಕಾದ ಪಾತ್ರೆ, ಪರಿಕರಗಳನ್ನು ಎರಡೂ ಗುಂಪಿನವರು ವಾಹನಗಳಲ್ಲಿ ತುಂಬಿಕೊಂಡು ತಂದು ದೇವಾಲಯದ ಒಳ ಹೋಗಲು ಪ್ರಯತ್ನಿಸಿದರು. ಈ ಬಗ್ಗೆ ತಹಶೀಲ್ದಾರ್ ವಿಶ್ವನಾಥ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಹಿಂದೆ ನಡೆಯುತ್ತಿದ್ದ ರೀತಿಯಲ್ಲೇ ಪ್ರಸಾದ ವಿನಿಯೋಗಕ್ಕೆ ಅವಕಾಶ ನೀಡಲಾಗಿದೆ. ಬೇರೆಯವರಿಗೆ ಅವಕಾಶ ನೀಡುವುದಿಲ್ಲ ಎಂದು ಮಾಹಿತಿ ನೀಡಿದರು.
ಈ ವೇಳೆ ಜಟಾಪಟಿ ನಡೆದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹೊರ ದೂಡಿದರು. ಈ ವೇಳೆ ಹಲವರಿಗೆ ಸಣ್ಣಪುಟ್ಟ ಗಾಯಗಳಾದವು. ಕಾಂಗ್ರೆಸ್ ಮುಖಂಡರು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ದೇವಾಲಯದ ಮುಂದೆ ಧರಣಿ ಆರಂಭಿಸಿದರು. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಯಿತು.
ಪತ್ರಕರ್ತರ ಮೊಬೈಲ್ ಕಸಿದ ಸಂಸದ ಪ್ರಜ್ವಲ್
ಈ ನಡುವೆ ಘಟನೆಯನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರೊಬ್ಬರ ಮೊಬೈಲ್ ಅನ್ನು ಸಂಸದ ಪ್ರಜ್ವಲ್ ರೇವಣ್ಣ ಕಿತ್ತುಕೊಂಡು, ದೃಶ್ಯಗಳನ್ನು ಡಿಲೀಟ್ ಮಾಡಿದ ಘಟನೆಯೂ ನಡೆಯಿತು.