ಮೈಸೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗೆ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 21 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಶ್ರೀನಿವಾಸ ಪ್ರಸಾದ್‌ಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಲು ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದರಿಂದ ಪಕ್ಷದ ಹೈಕಮಾಂಡ್ ಸೂಚನೆಯಂತೆ ರಾಜ್ಯಕ್ಕೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರು ಇಬ್ಬರೂ ನಾಯಕರ ನಡುವಿನ ತಿಕ್ಕಾಟಕ್ಕೆ ತೇಪೆ ಹಚ್ಚುವ ಪ್ರಯತ್ನವಾಗಿ ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ಬಿಎಸ್‌ವೈ – ಈಶ್ವರಪ್ಪ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಲು ಕಾರಣರಾಗುತ್ತಿದ್ದಾರೆ ಎಂಬ ಕಾರಣ ನೀಡಿ ಬಿಎಸ್‌ವೈ ಬಣದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರನ್ನು ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್‌ರನ್ನು ಪಕ್ಷದ ಸಹ ವಕ್ತಾರ ಜವಾಬ್ದಾರಿಯಿಂದ ವಿಮುಕ್ತಿ ಗೊಳಿಸಲಾಗಿತ್ತು.
ಇತ್ತ ಈಶ್ವರಪ್ಪ ಬಣದಲ್ಲಿ ಗುರುತಿಸಿ ಕೊಂಡಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಹಾಗೂ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಅವರನ್ನೂ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿತ್ತು. ಇದರಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ವಿ. ಶ್ರೀನಿವಾಸಪ್ರಸಾದ್‌ರನ್ನು ನೇಮಕ ಮಾಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ದಲಿತ ಮತಗಳನ್ನು ಸೆಳೆಯುವ ತಂತ್ರಗಾರಿಕೆ ಮೆರೆದಿದ್ದಾರೆ.
ಪಕ್ಷ ಸಂಘಟನೆಗೆ: 2013ರ ಚುನಾವಣೆ ನಂತರ ಇದೇ ನನ್ನ ಕಡೇ ಚುನಾವಣೆ. ಮುಂದೆ ಸಕ್ರಿಯ ರಾಜಕಾರಣದಲ್ಲಿರುತ್ತೇನೆ, ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಾ ಬಂದಿದ್ದ ವಿ. ಶ್ರೀನಿವಾಸ ಪ್ರಸಾದ್, ರಾಜ್ಯ ಸಚಿವ ಸಂಪುಟ ಪುನಾರಚನೆ ವೇಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಕೈಬಿಟ್ಟು ವಿಶ್ವಾಸದ್ರೋಹ ಮಾಡಿದರು ಎಂದು ಆರೋಪಿಸಿ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ನಂಜನಗೂಡು ಕ್ಷೇತ್ರದಲ್ಲಿ ಉಪ ಚುನಾ ವಣೆಗೆ ಕಾರಣರಾಗಿದ್ದರು.
ಏ.13ರಂದು ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಸಕ್ರಿಯ ರಾಜಕಾರಣದಲ್ಲಿದ್ದು ಪಕ್ಷದ ಸಂಘಟನೆಗೆ ತಮ್ಮ ಹಿರಿತನ ಮತ್ತು ಅನುಭವವನ್ನು ಧಾರೆ ಎರೆಯುತ್ತೇನೆ ಎಂದಿದ್ದ ಪ್ರಸಾದ್‌ಗೆ ಮೈಸೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ನಾಲ್ಕು ದಿನ ಬಾಕಿ ಇರುವಾಗ ಬಿ.ಎಸ್.ಯಡಿಯೂರಪ್ಪ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ
-ಹಳೆ ಮೈಸೂರು ಭಾಗದಲ್ಲಿ ಪ್ರಭಾವಿ ದಲಿತ ನಾಯಕ ರಾಗಿರುವ ವಿ.ಶ್ರೀನಿವಾಸಪ್ರಸಾದ್‌ರನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಬಳಸಿ ಕೊಳ್ಳುವ ಮೂಲಕ ದಲಿತ ಮತಬ್ಯಾಂಕ್‌ಗೆ ಕೈ ಹಾಕುವ ಯಡಿಯೂರಪ್ಪರ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಪ್ರಸಾದ್ ಬೆಂಬಲಿಗರಾದ ಮುಡಾ ಮಾಜಿ ಅಧ್ಯಕ್ಷರಾದ ಬಸವೇಗೌಡ ಹಾಗೂ ಕೆ.ಆರ್ ಮೋಹನ್ ಕುಮಾರ್ ಅವರನ್ನು ರಾಜ್ಯಕಾರ್ಯಕಾರಿಣಿ ವಿಶೇಷ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ.