ಕನ್ನಡದ ಕೆಲ ನಟಿಯರು ಈಗಾಗಲೇ ಬಾಲಿವುಡ್ ಅಂಗಳಕ್ಕೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಈಗ ಮತ್ತೂಬ್ಬ ನಟಿ ಕೂಡ ಬಾಲಿವುಡ್‌ನತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅದು ಬೇರಾರೂ ಅಲ್ಲ, ಪ್ರಣೀತಾ. ಹೌದು, ಅಪ್ಪಟ ಕನ್ನಡದ ನಟಿ ಪ್ರಣೀತಾ, ಬಾಲಿವುಡ್ ಸ್ಟಾರ್ ನಟ ಅಜಯ್‌ದೇವಗನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಣೀತಾ ಅಭಿನಯಿಸುತ್ತಿರುವ ಹಿಂದಿ ಚಿತ್ರದ ಹೆಸರು “ಭುಜ್; ದಿ ಪ್ರೈಡ್ ಆಫ್ ಇಂಡಿಯಾ’.
ಪ್ರಣೀತಾ ಅವರಿಗೆ ಪರಭಾಷೆ ಚಿತ್ರಗಳು ಹೊಸದೇನಲ್ಲ, ಈಗಾಗಲೇ ತೆಲುಗು, ತಮಿಳು ಚಿತ್ರರಂಗದಲ್ಲಿ ಸದ್ದು ಮಾಡಿರುವ ಅವರು, ಈಗ ಬಾಲಿವುಡ್‌ಗೂ ಹಾರಿದ್ದಾರೆ. ಈ ಹಿಂದೆ ಪ್ರಣೀತಾ, ಹಿಂದಿಯ ಆಲ್ಬಂ ಸಾಂಗ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಒಳ್ಳೆಯ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಡಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಅವರಿಗೆ ಅನೇಕ ಅವಕಾಶ ಬಂದಿದ್ದರೂ, ಅವುಗಳನ್ನು ಪಕ್ಕಕ್ಕೆ ಇಟ್ಟಿದ್ದರು.
ಈಗ ಇದೇ ಮೊದಲ ಸಲ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ಆ ಚಿತ್ರವನ್ನು ಅಭಿಷೇಕ್ ದುಧೆಯ್ನಾ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ದೇವಗನ್, ಭೂಷಣ್ ಕುಮಾರ್ ಮತ್ತಿತರರು ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ, ಇದೊಂದು ದೇಶಭಕ್ತಿ ಹೊಂದಿರುವ ದಂಪತಿಯ ಕಥೆವುಳ್ಳ ಚಿತ್ರವಂತೆ. ಪ್ರಣೀತಾ ಅವರಿಲ್ಲಿ ಅಜಯ್ ದೇವಗನ್ ಅವರ ಪತ್ನಿಯಾಗಿ ನಟಿಸುತ್ತಿದ್ದು, ಇಡೀ ಚಿತ್ರದುದ್ದಕ್ಕೂ ಅವರು ಡಿ ಗ್ಲಾಮ್ ಪಾತ್ರ ನಿರ್ವಹಿಸುತ್ತಿದ್ದಾರೆ.
ಅದರಲ್ಲೂ ಅವರದು ಸಾಂಪ್ರದಾಯಿಕ ಉಡುಗೆ ಚಿತ್ರದ ಹೈಲೈಟ್ ಆಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಶುರುವಾಗಿದೆ. ಇನ್ನು, “ಭುಜ್; ದಿ ಪ್ರೈಡ್ ಆಫ್ ಇಂಡಿಯಾ’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ. ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ರಾಣಾ ದಗ್ಗುಪಾಟಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ನಟಿಸುತ್ತಿದ್ದಾರೆ. ಅದೇನೆ ಇರಲಿ, “ಮಾಸ್‌ಲೀಡರ್’ ಚಿತ್ರದಲ್ಲಿ ನಟಿಸಿದ ನಂತರ ಪ್ರಣೀತಾ ಎಲ್ಲೋ ಕಾಣೆಯಾಗಿಬಿಟ್ಟರು ಅಂತಂದುಕೊಳ್ಳುತ್ತಿದ್ದವರಿಗೆ ಅವರು “ರಾಮನ ಅವತಾರ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಆ ಚಿತ್ರದಲ್ಲಿ ಪ್ರಣೀತಾ ಇಂಡಿಪೆಂಡೆಂಟ್ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅತ್ತ ತೆಲುಗು, ತಮಿಳು ಚಿತ್ರರಂಗದಲ್ಲೂ ಬೇಡಿಕೆ ಉಳಿಸಿಕೊಂಡಿರುವ ಪ್ರಣೀತಾ ಈಗ, ಬಾಲಿವುಡ್ ಅಂಗಳದಲ್ಲಿ ಜಿಗಿದಿದ್ದಾರೆ. ಮೊದಲ ಹಿಂದಿ ಚಿತ್ರದಲ್ಲೇ ಅಜಯ್ ದೇವಗನ್ ಜೊತೆ ನಾಯಕಿಯಾಗಿ ನಟಿಸುತ್ತಿರುವುದು ಸಹಜವಾಗಿಯೇ ಅವರಿಗೆ ಖುಷಿ ಇದೆ.