Advertisement
ಕಳೆದ 15 ದಿನಗಳಿಂದ ವಾಹನದಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿತ್ತು. ಆದರೆ ಈ ಎರಡೂ ವಾಹನಗಳಲ್ಲಿ ಸಚಿವ ಮಧ್ವರಾಜ್ ಅವರ ಭಾವಚಿತ್ರ ಬಿಟ್ಟರೆ ಕಾಂಗ್ರೆಸ್‌ನ ಹಿರಿಯ ನಾಯಕರು, ಪಕ್ಷದ ಚಿಹ್ನೆ ಇದ್ದಿರಲಿಲ್ಲ. ಎಲ್‌ಇಡಿ ಪರದೆಯಲ್ಲಿ ಸಚಿವರ ಸಾಧನೆಗಳನ್ನು ಬಿಂಬಿಸುವ ಚಿತ್ರಗಳು, ಹಿನ್ನೆಲೆ ಸ್ವರದೊಂದಿಗೆ ಇದ್ದು, ಇದರಲ್ಲಿ ಕಾಂಗ್ರೆಸ್ ನಾಯಕರ ಚಿತ್ರಗಳು ಬರುತ್ತಲಿದ್ದವಷ್ಟೆ. ಇನ್ನೊಂದು ವಾಹನದಲ್ಲಿ ವೃತ್ತಿಪರ ಸಂಗೀತಗಾರರು ಪ್ರಮೋದ್ ಅವರ ಸಾಧನೆಗಳನ್ನು ಸಂಗೀತ ರೂಪದಲ್ಲಿ ಹಾಡುತ್ತಿದ್ದರು. ಜನದಟ್ಟಣೆ ಇರುವ ಸ್ಥಳಗಳಿಗೆ ತೆರಳಿ ಪ್ರಚಾರ ಕಾರ್ಯವನ್ನು ದಿನಂಪ್ರತಿ ಮಾಡುತ್ತಿತ್ತು.
ಕಾಂಗ್ರೆಸ್ ಶಾಸಕರಾದರೂ, ಪ್ರಚಾರ ವಾಹನದಲ್ಲಿ ಎಲ್ಲಿಯೂ ಕಾಂಗ್ರೆಸ್‌ನ ಇತರೆ ನಾಯಕರು, ಪಕ್ಷದ ಅಧಿಕೃತ ಚಿಹ್ನೆ ಬಳಕೆ ಯಾಗಿಲ್ಲ ಎನ್ನುವುದ ಕುರಿತು ಈ ಹಿಂದೆ ಮಾತನಾಡಿದ್ದ ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸಮಾಜ ಸೇವಾ ಸಂಘ ಬೆಂಗಳೂರು ಇದರ ಅಧ್ಯಕ್ಷ ಎಲ್. ರಾಹುಲ್ ಅವರು, ಇದು ಪಕ್ಷದ ಪ್ರಚಾರವಲ್ಲ. ಪ್ರಮೋದ್ ಮಧ್ವರಾಜ್ ಅವರ ಅಭಿಮಾನಿ ಗಳಾದ ನಾವು ಮಾಡುತ್ತಿರುವುದು. ಈ ಕಾರಣದಿಂದ ಚಿಹ್ನೆ ಬಳಸಿಕೊಂಡಿಲ್ಲ ಎಂದಿದ್ದರು. ಚಿಹ್ನೆಯನ್ನು ಬಳಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಕಿರುವ ಒತ್ತಡದಿಂದ ಇದೀಗ ಚಿಹ್ನೆ ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ವಾಹನದಲ್ಲಿ ಕಾಂಗ್ರೆಸ್‌ನ ರಾಜ್ಯ, ರಾಷ್ಟ್ರೀಯ ನಾಯಕರ ಭಾವಚಿತ್ರವನ್ನೂ ಬಳಸಬೇಕು ಎನ್ನುವುದು ಕಾರ್ಯಕರ್ತರ ಆಗ್ರಹವಾಗಿದೆ. ಅಂದು-ಇಂದು: ನಿರ್ಧಾರ ನಮ್ಮದೆ
ಅಭಿವೃದ್ಧಿ ಪರ ಕೆಲಸಗಳನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸಮಾಜ ಸೇವಾ ಸಂಘದ ವತಿಯಿಂದ ಪ್ರಚಾರ ಕಾರ್ಯ ಶುರು ಮಾಡಲಾಗಿತ್ತು. ಹಾಗಾಗಿ ಚಿಹ್ನೆಯನ್ನು ಬಳಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಸ್ವಲ್ಪ ಗೊಂದಲ ಉಂಟಾಗಿದ್ದ ಕಾರಣ, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರಲ್ಲಿ ಚರ್ಚಿಸಿಕೊಂಡು ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಲು ನಿರ್ಧರಿಸಿದಂತೆ ಇದೀಗ ವಾಹನದಲ್ಲಿ ಅಧಿಕೃತವಾಗಿ ಚಿಹ್ನೆ ಬಳಸಿಕೊಳ್ಳಲಾಗಿದೆ. ಇಲ್ಲಿ ಯಾರ ಒತ್ತಡವೂ ಇಲ್ಲ. ಅಂದಿನ, ಇಂದಿನ ನಿರ್ಧಾರ ನಮ್ಮದೇ ಆಗಿದೆ.
– ಎಲ್. ರಾಹುಲ್, ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸ. ಸೇವಾ ಸಂಘದ ರಾಜ್ಯಾಧ್ಯಕ್ಷ