Advertisement

ಪ್ರಮೋದ್‌ ಮಧ್ವರಾಜ್‌ ಬಿಜೆಪಿಗೆ ಚರ್ಚೆ ಮತ್ತೆ ಮುನ್ನೆಲೆಗೆ

01:31 AM Feb 16, 2022 | Team Udayavani |

ಉಡುಪಿ: ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಅನೇಕ ವರ್ಷಗಳಿಂದ ಕೇಳಿಬರುತ್ತಿದೆ. ಬಿಜೆಪಿಯ ರಾಜ್ಯ ನಾಯಕರೊಂದಿಗೂ ಈ ಬಗ್ಗೆ ಪ್ರಮೋದ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಸಂಘ ಪರಿವಾರದ ಪ್ರಮುಖರೊಂದಿಗೆ ಉನ್ನತಮಟ್ಟದ ಚರ್ಚೆ ನಡೆಸಿರುವುದರಿಂದ ಅವರು ಬಿಜೆಪಿ ಸೇರುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ಪ್ರಮೋದ್‌ ಕಾಂಗ್ರೆಸ್‌ ಕಾರ್ಯ ಕ್ರಮಗಳಲ್ಲಿ ಮೊದಲಿನಷ್ಟು ಸಕ್ರಿಯವಾಗಿ ಈಗ ಪಾಲ್ಗೊಳ್ಳುತ್ತಿಲ್ಲ. ಕಾಂಗ್ರೆಸ್‌ ಭವನಕ್ಕೆ ಭೇಟಿ ನೀಡುವುದನ್ನು ಕಡಿಮೆ ಮಾಡಿದ್ದಾರೆ. ಹಾಗೆಯೇ ಬಿಜೆಪಿ ಮತ್ತು ಬಿಜೆಪಿ ನಾಯಕರ ವಿರುದ್ಧ ಟೀಕೆಗಳನ್ನು ಕಡಿಮೆ ಮಾಡಿದ್ದಾರೆಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್‌ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥರಾಗಿದ್ದರು.

ಬಿಜೆಪಿ ಸೇರುವ ಬಗ್ಗೆ ಕೆಲವು ದಿನಗಳ ಹಿಂದೆ ಸಂಘ ಪರಿವಾರದ ಹಿರಿಯರೊಬ್ಬರ ಜತೆಗೆ ಪ್ರಮೋದ್‌ ಸುದೀರ್ಘ‌ ಚರ್ಚೆ ನಡೆಸಿದ್ದಾರೆ, ಆ ಸಂದರ್ಭದಲ್ಲಿ ಕಾರ್ಯಕರ್ತರ ನೆಲೆಯಲ್ಲಿ ಪಕ್ಷಕ್ಕೆ ಸೇರಿ, ಸಂಘಟನ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರಮೋದರನ್ನು ಬಿಜೆಪಿಗೆ ಕರೆದುಕೊಳ್ಳಲು ಸ್ಥಳೀಯ ನಾಯಕರಲ್ಲಿ ಅಷ್ಟೊಂದು ವಿರೋಧವಿಲ್ಲ. ಆದರೆ ಕೆಲವರ ವಿರೋಧವಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಜತೆಗೂ ಈ ಬಗ್ಗೆ ಪ್ರಮೋದ್‌ ಚರ್ಚೆ ನಡೆದಿದ್ದಾರೆ. ಹಾಗೆಯೇ ಸ್ಥಳೀಯ ಶಾಸಕರೊಂದಿಗೂ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲಕ್ಕೆ ಡಾ| ಡಿ.ವೀರೇಂದ್ರ ಹೆಗ್ಗಡೆ ಭೇಟಿ

Advertisement

ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಜತೆಗೆ ತಾ.ಪಂ., ಜಿ.ಪಂ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಸಚಿವರ ನೆಲೆಯಲ್ಲಿ ಪ್ರಮೋದ್‌ ಪಕ್ಷದ ಯಾವುದೇ ಕಾರ್ಯ ಯೋಜನೆಗಳಲ್ಲಿ ಸಕ್ರಿಯವಾಗಿಲ್ಲ. ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿದ್ದ ಸಂದರ್ಭ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಸಾಧನೆಯನ್ನು ಪ್ರಮೋದ್‌ ಶ್ಲಾಘಿಸಿದ್ದರು.

ಸಮುದ್ರದ ಅಲೆ ಒಂದೊಂದು ಋತುವಿಗೂ ವಿಭಿನ್ನವಾಗಿರುತ್ತದೆ. ಒಮ್ಮೆ ಏರುತ್ತದೆ, ಮತ್ತೂಮ್ಮೆ ಇಳಿಯುತ್ತದೆ. ಹೀಗೆ ಕಾಂಗ್ರೆಸ್‌ ಬಿಡುತ್ತೇನೆ ಎಂಬ ವದಂತಿ ಅನೇಕ ವರ್ಷದಿಂದಲೂ ಇದೆ. ಸದ್ಯಕ್ಕೆ ಆ ರೀತಿ ಯಾವುದೂ ಇಲ್ಲ.
– ಪ್ರಮೋದ್‌ ಮಧ್ವರಾಜ್‌,
ಮಾಜಿ ಸಚಿವ

ಪ್ರಮೋದ್‌ ಬಿಜೆಪಿಗೆ ಬರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ. ಕಾರ್ಯಕರ್ತರೊಂದಿಗೆ ಚರ್ಚಿಸ‌ದೆ ಪಕ್ಷಕ್ಕೆ ಸೇರ್ಪಡೆ ಸರಿಯಲ್ಲ. ಈ ಬಗ್ಗೆ ಪಕ್ಷದ ರಾಜಾಧ್ಯಕ್ಷರು, ಪದಾಧಿ ಕಾರಿ ಗಳೊಂದಿಗೆ ಚರ್ಚಿಸಲಾಗುವುದು.
-ಕುಯಿಲಾಡಿ ಸುರೇಶ್‌
ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ

ಪ್ರಮೋದ್‌ ಕಾಂಗ್ರೆಸ್‌ ಬಿಡುವ ಸಾಧ್ಯತೆ ಯಿಲ್ಲ. ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸ್ವಲ್ಪ ಕಡಿಮೆ ಯಾಗಿದೆ. ರಾಜ್ಯ ಮಟ್ಟದ ನಾಯಕ ರಿಗೂ ವದಂತಿ ಬಗ್ಗೆ ಮಾಹಿತಿ ನೀಡಿದ್ದೇವೆ. ಅವರೂ ನಮ್ಮ ನಾಯಕ ರನ್ನು ಭೇಟಿ ಮಾಡಿ ಬಂದಿದ್ದಾರೆ.
– ಅಶೋಕ್‌ ಕುಮಾರ್‌ ಕೊಡವೂರು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next