ಉಡುಪಿ: ಲೋಕಸಭೆ ಚುನಾವಣೆಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಶುಕ್ರವಾರ ಅಮ್ಮುಂಜೆಯ ತಮ್ಮ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿಯನ್ನು ತೊರೆಯುವ ಸಾಧ್ಯತೆಯ ಅಪಪ್ರಚಾರ ಶುರುವಾಗಿದೆ. ಮುಂದೊಂದು ದಿನ ರಾಜಕೀಯ ನಿವೃತ್ತಿ ಹೊಂದುವುದು ಅಥವಾ ನನ್ನ ದೇಹ ಅಂತ್ಯದವರೆಗೆ ಬಿಜೆಪಿ ಕಾರ್ಯಕರ್ತನಾಗಿ ಉಳಿಯುತ್ತೇನೆ. ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ನಾನೇ ಅಭ್ಯರ್ಥಿ ಎಂಬ ಸ್ಪಷ್ಟತೆ ಇಲ್ಲ. ಪಕ್ಷದಿಂದ ಟಿಕೆಟ್ ನೀಡಿದಲ್ಲಿ ಎಲ್ಲರ ಆಶೀರ್ವಾದ ಪಡೆದು ಮತದಾರ ಸಹಕಾರ ಕೋರಿ ಸ್ಪರ್ಧೆಗೆ ಇಳಿಯಲು ಸಿದ್ಧನಿದ್ದೇನೆ. ಟಿಕೆಟ್ ನೀಡದೇ ಇದ್ದರೆ ಬಿಜೆಪಿ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಪಕ್ಷ ಈವರೆಗೂ ಯಾವುದೇ ಪಕ್ಷ ಪ್ರಮುಖ ಜವಾಬ್ದಾರಿ ನೀಡಿಲ್ಲ. ಆದರೆ, ಪಕ್ಷ ಕಾಲ ಕಾಲಕ್ಕೆ ಕೆಲವು ಜವಾಬ್ದಾರಿ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾರವಾರ, ಭಟ್ಕಳ, ಹಾನಗಲ್, ಮೂಡಗಿರಿ ಶೃಂಗೇರಿ, ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಸೇರಿ ಹಲವೆಡೆ ಕೆಲಸ ಮಾಡಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಲಿದ್ದೇನೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಮತ್ತು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಬಾಯಿಸಲಿದ್ದೇನೆ. ಶಾಸಕನಾಗಿಯೂ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಿದ್ದೇನೆ.