Advertisement

ಬಹಿರಂಗ ಕ್ಷಮೆ ಯಾಚಿಸದಿದ್ದರೆ 10 ಕೋ.ರೂ. ಮಾನನಷ್ಟ ದಾವೆ

08:30 AM Mar 23, 2018 | Karthik A |

ಉಡುಪಿ: ಸಿಂಡಿಕೇಟ್‌ ಬ್ಯಾಂಕಿನಲ್ಲಿ ಅಧಿಕ ಮೊತ್ತದ ಸಾಲಕ್ಕೆ ಕಡಿಮೆ ಮೌಲ್ಯದ ಆಸ್ತಿ ಅಡವಿರಿಸಿದ್ದಾರೆ ಎಂದು ಆರೋಪಿಸಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುವಂತೆ ಮಾಡಿ ಮಾನಹಾನಿಗೈದಿರುವ ಬೆಂಗಳೂರಿನ ಟಿ.ಜೆ. ಅಬ್ರಹಾಂ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ 10 ಕೋ.ರೂ. ಮಾನನಷ್ಟ ಪ್ರಕರಣ ಹೂಡಲಾಗುವುದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉಡುಪಿಯಲ್ಲಿ ಗುರುವಾರ ಮಾಧ್ಯಮಗಳಿಗೆ ತಿಳಿಸಿದರು. ಟಿ.ಜೆ. ಅಬ್ರಹಾಂ ಮಾಡಿರುವ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ರಾಜ್ಯ, ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಇದರಿಂದ ತನ್ನ ಬಗ್ಗೆ ಅಪಪ್ರಚಾರವಾಗಿದೆ. ಹಾಗಾಗಿ ವಕೀಲ ಎಂ. ಶಾಂತಾರಾಮ್‌ ಶೆಟ್ಟಿ ಅವರ ಮೂಲಕ ಮಾ. 21ರಂದು ನೋಟಿಸು ಕಳುಹಿಸಲಾಗಿದ್ದು, 3 ದಿನಗಳ ಒಳಗೆ ಅವರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಪ್ರಮೋದ್‌ ಹೇಳಿದರು.

Advertisement

ನಾನು ಬಹಳ ಕಷ್ಟಪಟ್ಟು ವ್ಯಕ್ತಿತ್ವವನ್ನು ಬೆಳೆಸಿಕೊಂಡು ರಾಜಕೀಯವಾಗಿ ಹೆಸರು ಗಳಿಸಿದ್ದೇನೆ. ಅದನ್ನು ಕ್ಷಣಾರ್ಧದಲ್ಲಿ ನಾಶಗೊಳಿಸುವ ಹುನ್ನಾರ ಮಾಡಲಾಗಿದೆ. ಚುನಾವಣೆಗೆ ಸ್ಪರ್ಧಿಸುವಾಗ ನಾನು ಚುನಾವಣಾ ಆಯೋಗಕ್ಕೆ ಎಲ್ಲ ಆಸ್ತಿ ವಿವರ ಸಲ್ಲಿಸುತ್ತೇನೆ. ಅಲ್ಲಿಯವರೆಗೆ ನನ್ನ ಬ್ಯಾಂಕಿಂಗ್‌ ವಿವರವನ್ನು ಯಾರಿಗೂ ಕೊಡುವ ಅಗತ್ಯ ಇಲ್ಲ. ಸಾಲ ಪಡೆದುದಕ್ಕಿಂತ ಕಡಿಮೆ ಮೌಲ್ಯದ ದಾಖಲೆಯನ್ನು ಬ್ಯಾಂಕಿಗೆ ನೀಡಿದ್ದೇನೆ ಎಂದು ಆರೋಪ ಮಾಡಿರುವ ಅವರಿಗೆ ಅನ್ಯ ದಾಖಲೆಗಳ ಬಗ್ಗೆ ತಿಳಿದಿಲ್ಲ ಎಂದು ಪ್ರಮೋದ್‌ ಹೇಳಿದರು.

ಮಾಜಿಗಳಿಬ್ಬರ ಷಡ್ಯಂತ್ರ?
ಆರೋಪ ಮಾಡಿದವರು ಇಲ್ಲಿನವರಲ್ಲ, ಬೆಂಗಳೂರಿನವರು. ಈ ಷಡ್ಯಂತ್ರದ ಹಿಂದೆ ಅನ್ಯ ಪಕ್ಷದಲ್ಲಿರುವ ಇಬ್ಬರ ಪಾತ್ರವಿರಬಹುದು ಎಂದುಕೊಂಡಿದ್ದೇನೆ. ಒಬ್ಬರು ನಾನು ಬಿಜೆಪಿಗೆ ಬಾರದಂತೆ ತಡೆಯುವ ಅದೇ ಪಕ್ಷದ ಮಾಜಿ ನಾಯಕ; ಇನ್ನೊಬ್ಬರು ನಮ್ಮಲ್ಲಿ ಮಾಜಿಯಾಗಿ ಅಲ್ಲಿಗೆ ಹೋದವರು ಇರಬಹುದು ಎಂದು ತಿಳಿಸಿದರು.

ಬಿಜೆಪಿಯಿಂದ ಹಿಂಸೆ: ಸಿಎಂ ಉತ್ತರಿಸಬೇಕು
ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯವರು ಹಿಂಸೆ ನೀಡುತ್ತಿದ್ದಾರೆ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಮೋದ್‌, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಅವರಿಗೆ ಗುಪ್ತಚರ ಇಲಾಖೆಯಿಂದ ಬರುವ ಆಂತರಿಕ ಮಾಹಿತಿ ಇರುತ್ತದೆ. ಆ ಪ್ರಕಾರ ಅವರು ಹೇಳುತ್ತಿರಬಹುದು. ಅದಕ್ಕೆ ಅವರೇ ಉತ್ತರಿಸಬೇಕು ಎಂದು ತಿಳಿಸಿದರು.

ಫಿಶ್‌ ಮೀಲ್‌ ಕಾನೂನುಬದ್ಧವಾಗಿದೆ
ಬ್ಯಾಂಕ್‌ ವಂಚನೆ ಮಾತ್ರವಲ್ಲದೆ ಫಿಶ್‌ ಮೀಲ್‌, ಪೆಟ್ರೋಲ್‌ ಬಂಕ್‌ ಅವ್ಯವಹಾರಗಳನ್ನೂ ಬಯಲು ಮಾಡುತ್ತೇನೆಂದು ಅಬ್ರಹಾಂ ಹೇಳಿದ್ದಾರಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಫಿಶ್‌ಮೀಲ್‌ ಕಾನೂನುಬದ್ಧವಾಗಿಯೇ ನಡೆಯುತ್ತಿದೆ; ಪೆಟ್ರೋಲ್‌ ಬಂಕ್‌ ತಾಯಿಯದ್ದು ಎಂದರು.

Advertisement

ನಂ. 1 ಆಗಿದ್ದರಿಂದ ಬೇಡಿಕೆ
ಸಮೀಕ್ಷೆಯ ಪ್ರಕಾರ ರಾಜ್ಯದ ನಂ. 1 ಶಾಸಕ ನಾನಾಗಿದ್ದೇನೆ. ಆದ್ದರಿಂದ ನನಗೆ ಹೆಚ್ಚಿನ ಬೇಡಿಕೆ ಇರುವುದು ಸಹಜ. ಹಾಗಾಗಿ ನನ್ನ ಹೆಸರೇ ಮುಂಚೂಣಿಯಲ್ಲಿ ಬಂದಿರಬಹುದು. ನಾನು ಯಾವುದೇ ಒತ್ತಡಕ್ಕೆ ಮಣಿದು ಪಕ್ಷ ಬಿಟ್ಟು ಹೋಗುವುದೇ ಇಲ್ಲ ಎಂದು ಬಿಜೆಪಿ ಸೇರುವವರ ಪಟ್ಟಿಯಲ್ಲಿ ನಿಮ್ಮ ಹೆಸರೇ ಮುಂಚೂಣಿಯಲ್ಲಿತ್ತಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರಮೋದ್‌ ಉತ್ತರಿಸಿದರು.

ಬಿಜೆಪಿಗೆ ಹೋಗುವುದೇ ಇಲ್ಲ
ಬಿಜೆಪಿಗೆ ನಾನು ಹೋಗುವುದೇ ಇಲ್ಲ ಎಂದು ಪ್ರಮೋದ್‌ ಮಧ್ವರಾಜ್‌ ಮತ್ತೆ ಸ್ಪಷ್ಟಪಡಿಸಿದರು. ತಾನು ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಎದ್ದಾಗ, ಅವರು ಬಿಜೆಪಿಗೆ ಬಾರದಂತೆ ತಡೆಯುತ್ತೇವೆ ಎಂದು ಜಿಲ್ಲೆಯಲ್ಲಿರುವ ಒಂದಿಬ್ಬರು ಬಿಜೆಪಿ ನಾಯಕರು ಹೇಳಿದ್ದಾರಂತೆ. ಅವರೇ ಪಕ್ಷದ ಗೇಟು ಹಾಕಿರುವಾಗ ನಾನೇಕೆ ಹೋಗಲಿ? ಪಕ್ಷದ ಬಾಗಿಲು ತೆರೆದಿದ್ದರೆ ಮಾತ್ರ ನಾವು ಅಲ್ಲಿಗೆ ಹೋಗುವ ಪ್ರಯತ್ನ, ಚಿಂತನೆ ಮಾಡಬಹುದು. ಅಲ್ಲಿನ ಗೇಟು ಬಂದ್‌ ಆಗಿರುವಾಗ ನಾನೇಕೆ ಸುಮ್ಮನೆ ಚಿಂತಿಸಲಿ ಎಂದು ಪ್ರಮೋದ್‌ ಹೇಳಿದರು.

ಹಾರುವವ ನಾನಲ್ಲ !
ಬಿಜೆಪಿಯ ಗೇಟು ಹಾಕಿದ್ದರೆ ಹಿಂದಿನ ಬಾಗಿಲಿನಿಂದ ಹೋಗುವಿರಾ ಅಥವಾ ಗೇಟು ತೆರೆಯದಿದ್ದರೆ ಹಾರಿಕೊಂಡು ಹೋಗುವಿರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಹಿಂಬದಿ ಬಾಗಿಲು ಎಲ್ಲಿದೆ ಎಂದು ನೀವೇ ಹುಡುಕಿ ಕೊಡಿ ಎಂದು ಮಾರ್ಮಿಕವಾಗಿ ಹೇಳಿದ ಸಚಿವರು, ಹಾರುವ ಸ್ವಭಾವ ನನ್ನದಲ್ಲ; ನಾನು ಸ್ವಾಭಿಮಾನಿ. ನನಗೆ ನನ್ನ ಕಾಂಗ್ರೆಸ್‌ ಪಕ್ಷದಿಂದ ಜಿಲ್ಲೆಯಲ್ಲಿ ಏನೂ ತೊಂದರೆಯಾಗಿಲ್ಲ. ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ 1 ಲ.ರೂ. ಕಟ್ಟಿ ಅರ್ಜಿ ಹಾಕಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next