ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ನಡೆದ ಪುರುಷರ ಬ್ಯಾಡ್ಮಿಂಟನ್ ಫೈನಲ್ ನಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಎಸ್ ಎಲ್ 3 ವಿಭಾಗದ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿದ ಪ್ರಮೋದ್ ಭಗತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಇದನ್ನೂ ಓದಿ:ಮನೀಶ್ ಚಿನ್ನದ ಮೆರುಗು: ಚಿನ್ನ- ಬೆಳ್ಳಿಗೆ ಗುರಿಯಿಟ್ಟ ಭಾರತದ ಶೂಟರ್ ಗಳು
ಇದೇ ವಿಭಾಗದಲ್ಲಿ ಭಾರತದ ಮನೋಜ್ ಸರ್ಕಾರ್ ಕಂಚಿನ ಪದಕ ಗೆದ್ದುಕೊಂಡರು. ಕಂಚಿನ ಪದಕದ ಸ್ಪರ್ಧೆಯಲ್ಲಿ ಮನೋಜ್ ಸರ್ಕಾರ್ ಅವರು ಜಪಾನಿನ ಆಟಗಾರರನ್ನು 22-20, 21-13 ಸೆಟ್ ಅಂತರದಿಂದ ಸೋಲಿಸಿದರು.
ಇಂದು ಬೆಳಗ್ಗೆ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ಗಳಾದ ಮನೀಶ್ ನರ್ವಾಲ್ ಚಿನ್ನಕ್ಕೆ ಗುರಿಯಿಟ್ಟರೆ, ಸಿಂಗರಾಜ್ ಅಧಾನ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಈ ಬಾರಿಯ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಯಶಸ್ವಿಯಾಗಿ ಮುಂದುವರಿದಿದೆ. ಇದುವರೆಗೆ ಭಾರತದ ಕ್ರೀಡಾಪುಟಗಳು 17 ಪದಕಗಳನ್ನು ಗೆದ್ದುಕೊಂಡಿದ್ದಾರೆ. 4 ಚಿನ್ನ , 7 ಬೆಳ್ಳಿ ಮತ್ತು 6 ಕಂಚಿನ ಪದಕಗಳು ಸೇರಿವೆ.