Advertisement
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ಈ ನೇಮಕಾತಿ ಮಾಡಲಾಗಿದೆ. ವಿಶೇಷವೆಂದರೆ, ಚುನಾವಣಾ ಉಸ್ತುವಾರಿ ಮತ್ತು ಸಹ ಉಸ್ತುವಾರಿ ಇಬ್ಬರೂ ಪಕ್ಕದ ಮಹಾರಾಷ್ಟ್ರ ರಾಜ್ಯದವರು.
Related Articles
ಪ್ರಕಾಶ್ ಜಾಬ್ಡೇಕರ್ ಅವರನ್ನು ರಾಜ್ಯ ಚುನಾವಣಾ ಉಸ್ತುವಾರಿಯಾಗಿ ನೇಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿರ್ಧಾರದ ಹಿಂದೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಹಾಕುವ ಉದ್ದೇಶವೂ ಇದೆ ಎಂದು ಹೇಳಲಾಗಿದೆ.
Advertisement
ಪ್ರಕಾಶ್ ಜಾಬ್ಡೇಕರ್ ಅವರು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಆತ್ಮೀಯರು. ಹೀಗಾಗಿ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವ ಸಂದರ್ಭದಲ್ಲಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಈ ಅಂಶ ಕೂಡ ಪಕ್ಷದ ರಾಜ್ಯ ಘಟಕದಲ್ಲಿ ಆಂತರಿಕವಾಗಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಸಹಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೇ ಮೊದಲ ಬಾರಿ ಚುನಾವಣಾ ಸಹ ಉಸ್ತುವಾರಿ:ಬಿಜೆಪಿಯಲ್ಲಿ ಎಲ್ಲಾ ರಾಜ್ಯಗಳಿಗೆ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಲಾಗುತ್ತದೆ. ಜತೆಗೆ ಚುನಾವಣೆ ಬಂದಾಗ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡುವುದು ಸಂಪ್ರದಾಯ. ಚುನಾವಣಾ ಉಸ್ತುವಾರಿಗಳು ಮತ್ತು ಪಕ್ಷದ ಉಸ್ತುವಾರಿ ವಹಿಸಿಕೊಂಡವರು ಹೊಂದಾಣಿಕೆಯಿಂದ ಕಾರ್ಯತಂತ್ರಗಳನ್ನು ರೂಪಿಸಬೇಕು. ಆದರೆ, ಇದೇ ಮೊದಲ ಬಾರಿ ಕರ್ನಾಟಕಕ್ಕೆ ಚುನಾವಣಾ ಸಹ ಉಸ್ತುವಾರಿಯನ್ನೂ (ಪಿಯೂಷ್ ಗೋಯಲ್) ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ವಹಿಸಿರುವ ಮುರಳೀಧರರಾವ್ ಅವರ ಬಗ್ಗೆ ಅನೇಕರಲ್ಲಿ ಅಸಮಾಧಾನ ಇರುವ ಕಾರಣ ಚುನಾವಣೆ ಸಂದರ್ಭದಲ್ಲಿ ಅವರಿಗೆ ಹೆಚ್ಚು ಜವಾಬ್ದಾರಿ ನೀಡುವ ಬದಲು ಚುನಾವಣಾ ಸಹ ಉಸ್ತುವಾರಿಯನ್ನು ನೇಮಿಸುವ ಮೂಲಕ ಈ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನವನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮಾಡಿದ್ದಾರೆ. ಸಂತೋಷ್‌ಗೆ ಹೆಚ್ಚಿನ ಜವಾಬ್ದಾರಿ
*ರಾಜ್ಯ ಬಿಜೆಪಿಲ್ಲಿ ಭಿನ್ನಮತ ಉದ್ಭವಿಸಿದಾಗ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರಿಗೆ ಕರ್ನಾಟಕದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂತೋಷ್ ಅವರು ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ನಂತರದಲ್ಲಿ ಅವರಿಬ್ಬರ ಸಂಬಂಧ ಹಳಸಿದ್ದರಿಂದ ಸಂತೋಷ್ ಅವರನ್ನು ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ನೇಮಕ ಮಾಡಲಾಗಿತ್ತು. ಈ ಮಧ್ಯೆ ಸಂತೋಷ್ ಅವರಿಗೆ ದಕ್ಷಿಣ ಭಾರತದ ಉಸ್ತುವಾರಿ ವಹಿಸಿದ್ದ ಪಕ್ಷ, ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅವರನ್ನು ರಾಜ್ಯಕ್ಕೂ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ನಡೆಯುತ್ತಿರುವ ಮಂಗಳೂರು ಚಲೋ ಹೋರಾಟದ ಉಸ್ತುವಾರಿಯನ್ನು ಸಂತೋಷ್ ಅವರಿಗೆ ವಹಿಸಲಾಗಿದೆ.