ನಟ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ “ಚೀತಾ’ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಹೆಚ್. ಎಂ.ಟಿ ಫ್ಯಾಕ್ಟರಿ ಆವರಣದಲ್ಲಿ ನಡೆದ “ಚೀತಾ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು, ಸಿನಿಮಾಕ್ಕೆ ಚಾಲನೆ ನೀಡಿದರು.
ಅಂದಹಾಗೆ, “ಚೀತಾ’ ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ 39ನೇ ಸಿನಿಮಾವಾಗಿದ್ದು, ಪೂರ್ಣ ಪ್ರಮಾ ಣ ದ ಆ್ಯಕ್ಷನ್ ಲುಕ್ ಇರುವಂತಹ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಳ್ಳುತ್ತಿದ್ದಾರೆ. “ಚೀತಾ’ ಮುಹೂರ್ತದ ಬಳಿಕ ಮಾತನಾಡಿದ ಪ್ರಜ್ವಲ್ ದೇವರಾಜ್, “ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರದ ಸಿನಿಮಾ. ಆ್ಯಕ್ಷನ್ ಜೊತೆಗೆ ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲ ಥರದ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಕೂಡ ಈ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ನಾನು ಮಾರ್ಕೇಟ್‌ನಲ್ಲಿ ಹುಟ್ಟಿ, ಅಲ್ಲೇ ಬೆಳೆಯುವ ಹುಡುಗನಾಗಿ ಕಾಣಿಸಿಕೊಳ್ಳುತ್ತೇನೆ. ಇಂಥ ಹುಡುಗನ ಲೈಫ್ನಲ್ಲಿ ಏನೇನು ಇರುತ್ತದೆ? ಏನೇನು ನಡೆಯುತ್ತದೆ? ಎಂಬುದೇ ಈ ಸಿನಿಮಾ. ಇಲ್ಲಿಯವರೆಗೂ ಕಾಣಿಸಿಕೊಂಡ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನ ಪಾತ್ರ “ಚೀತಾ’ದಲ್ಲಿದೆ’ ಎಂದು ತಮ್ಮ ಪರಿಚಯ ಮಾಡಿಕೊಟ್ಟರು.
ರಾಜಲಕ್ಷ್ಮೀ ಎಂಟರ್‌ಟೈನ್ಮೆಂಟ್’ ಬ್ಯಾನರಿನಲ್ಲಿ ಪ್ರತಿಭಾ ನರೇಶ್ ನಿರ್ಮಾಣ ಮಾಡುತ್ತಿರುವ “ಚೀತಾ’ ಸಿನಿಮಾಕ್ಕೆ ರಾಜ ಕಲೈ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 23 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ, ನೃತ್ಯ ಸಂಯೋಜಕರಾಗಿ ಗುರುತಿಸಿಕೊಂಡಿರುವ ರಾಜ ಕಲೈ ಕುಮಾರ್ “ಚೀತಾ’ ಸಿನಿಮಾದ ಮೊದಲ ಬಾರಿಗೆ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
“ಇಡೀ ಸಿನಿಮಾದ ಮಾರ್ಕೇಟ್‌ನಲ್ಲಿ ನಡೆಯುತ್ತದೆ. “ಚೀತಾ’ ಅಂದ್ರೆ ವೇಗಕ್ಕೆ ಮತ್ತೂಂದು ಹೆಸರು. ಈ ಸಿನಿಮಾದಲ್ಲೂ ಕಥೆ, ಸನ್ನಿವೇಶಗಳು ಮತ್ತು ಪಾತ್ರಗಳು ಹಾಗೇ ವೇಗವಾಗಿ ಸಾಗುತ್ತದೆ. ಸಿನಿಮಾಕ್ಕೆ ಸೂಕ್ತವೆಂಬ ಕಾರಣಕ್ಕೆ “ಚೀತಾ’ ಟೈಟಲ್ ಇಟ್ಟುಕೊಂಡಿದ್ದೇವೆ. ತಾಯಿಯ ಕೂಗನ್ನು ಮಗ ನೆರವೇರಿಸುವುದೇ “ಚೀತಾ’ ಸಿನಿಮಾದ ಒಂದು ಸಾಲಿನ ಕಥೆ’ ಎಂಬುದು ನಿರ್ದೇಶಕ ಕಲೈ ಕುಮಾರ್ ವಿವರಣೆ.
“ಚೀತಾ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಶ್ರುತಿ ಹರಿಹರನ್, ಶಿವರಾಜ್ ಕೆ. ಆರ್. ಪೇಟೆ, ಗುರುರಾಜ್ ಜಗ್ಗೇಶ್, ಗೋವಿಂದೇ ಗೌಡ (ಜಿ. ಜಿ), ಸುನೀಲ್, ಅಭಯ್ ಪುನೀತ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. “ಚೀತಾ’ ಸಿನಿಮಾಕ್ಕೆ ನಾಯಕಿ ಹುಡುಕಾಟ ನಡೆಯುತ್ತಿದ್ದು, ಇನ್ನೂ ಹೆಸರು ಅಂತಿಮವಾಗಿಲ್ಲ.
ಇನ್ನು “ಚೀತಾ’ ಸಿನಿಮಾಕ್ಕಾಗಿ ಬೆಂಗಳೂರಿನ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಬೃಹತ್ ಮಾರ್ಕೇಟ್ ಸೆಟ್‌ಗಳನ್ನು ಹಾಕಲಾಗಿದೆ. “ಚೀತಾ’ ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ, ಗುರುಪ್ರಸಾದ್ ನರ್ನಾಡ್ ಛಾಯಾ ಗ್ರಹಣವಿದೆ. ಇದೇ ನವೆಂಬರ್ ಮೊದಲ ವಾರದ ಬಳಿಕ “ಚೀತಾ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ