Advertisement

ಜೀವ ವಿಮೆ ನೋಂದಣಿ: ರಾಷ್ಟ್ರಕ್ಕೆ ಜಿಲ್ಲೆ ಪ್ರಥಮ  

04:11 PM May 31, 2023 | Team Udayavani |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಷ್ಟ್ರದಲ್ಲಿಯೇ ಅತಿ ಹೆಚ್ಚಿನ ಗ್ರಾಹಕರನ್ನು ನೋಂದಾಯಿಸುವ ಮೂಲಕ ಗಮನ ಸೆಳೆದಿದೆ.

Advertisement

ಹೆಗ್ಗಳಿಕೆ: ಬಡವರ ಪಾಲಿಗೆ ಅತ್ಯಂತ ಕಡಿಮೆ ಪ್ರೀಮಿಯಂ ಇರುವ ಜೀವ ವಿಮೆ ಎಂಬ ಹೆಗ್ಗಳಿಕೆ ಇರುವ ಈ ಎರಡು ಯೋಜನೆಗಳಡಿಯಲ್ಲಿ ಜಿಲ್ಲಾದ್ಯಂತ ಹೆಚ್ಚಿನ ಜನರನ್ನು ಆಂದೋಲನದ ಮಾದರಿಯಲ್ಲಿ ನೋಂದಣಿ ಕಾರ್ಯ ಮಾಡಿ ಗುರಿ ಸಾಧನೆ ಮಾಡುವ ಮೂಲಕ ಜಿಲ್ಲಾಡಳಿತ ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ಗುರಿಗಿಂತ ಅಧಿಕ ಸಾಧನೆ: ವರ್ಷಕ್ಕೆ ಕೇವಲ 436 ಶುಲ್ಕ ಪಾವತಿಸುವ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯಡಿ ಜಿಲ್ಲೆಗೆ ನೀಡಿದ್ದ ಒಟ್ಟು ಗುರಿ 48,296 ಪೈಕಿ ಜಿಲ್ಲೆಯಲ್ಲಿ ಗುರಿ ಮೀರಿ ಬರೋಬ್ಬರಿ 50,225 ಮಂದಿಯನ್ನು ನೋಂದಾಯಿಸಲಾಗಿದೆ. ಅದೇ ರೀತಿ ವಾರ್ಷಿಕ ಕೇವಲ 20 ರೂ. ಪಾವತಿಸುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಜಿಲ್ಲೆಗೆ ನೀಡಿದ್ದ ಗುರಿ 1,60.621 ಮಂದಿ ಪೈಕಿ 1,63,078 ಮಂದಿಯನ್ನು ನೋಂದಾಯಿಸುವ ಮೂಲಕ ಜಿಲ್ಲೆಯ ಬ್ಯಾಂಕ್‌ಗಳು, ಸ್ಥಳೀಯ ಸಂಸ್ಥೆಗಳು ರಾಷ್ಟ್ರದ ಗಮನ ಸೆಳೆದಿವೆ. ಕಡಿಮೆ ಪ್ರೀಮಿಯಂ: ಇನ್ನೂ ಈ ಎರಡು ಜೀವ ವಿಮೆ ಯೋಜನೆಗಳಡಿಯಲ್ಲಿ ಕೇಂದ್ರ ಸರ್ಕಾರ ವಾರ್ಷಿಕ ಅತ್ಯಂತ ಕಡಿಮೆ ಪ್ರೀಮಿಯಂ ವಿಧಿಸುತ್ತಿದ್ದು, ಇದರ ಬಗ್ಗೆ ಜಿಲ್ಲಾಡಳಿತ ಅದರಲ್ಲೂ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ ಇತರೆ ಬ್ಯಾಂಕ್‌ಗಳ ಮೂಲಕ ಜಿಲ್ಲೆಯ ಜನರಲ್ಲಿ ವಿಶೇಷ ಅರಿವು ಹಾಗೂ ಜಾಗೃತಿ ಮೂಡಿಸಿರುವ ಪರಿಣಾಮ ಜಿಲ್ಲೆಯು ಇದೀಗ ಇಡೀ ರಾಷ್ಟ್ರದಲ್ಲಿ ಜೀವ ವಿಮೆ ನೋಂದಣಿಯಲ್ಲಿ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ.

ಇಷ್ಟೊಂದು ನೋಂದಣಿ ಸಾಧ್ಯವಾಗಿದ್ದು ಹೇಗೆ?: ಕೇಂದ್ರ ಸರ್ಕಾರದ ಈ ಮಹತ್ವಕಾಂಕ್ಷಿ ಎರಡು ಜೀವ ವಿಮೆ ಯೋಜನೆಗಳ ಬಗ್ಗೆ ಜಿಲ್ಲೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಗೆ ಬರುವ ಗ್ರಾಪಂಗಳ ಮೂಲಕ ಹಾಗೂ ವಿಶೇಷವಾಗಿ ಜಿಲ್ಲಾದ್ಯಂತ ಅಸ್ತಿತ್ವದಲ್ಲಿರುವ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಮೂಲಕ ಅರಿವು ಮೂಡಿಸಿ ಪ್ರತಿ ಗ್ರಾಮದಲ್ಲಿ ಈ ಬಗ್ಗೆ ಕರಪತ್ರಗಳ ಮೂಲಕ ಅರಿವು ಮೂಡಿಸಲಾಗಿತ್ತು. ಬ್ಯಾಂಕ್‌ರ್‌ಗಳ ವಿಶೇಷ ಕಾಳಜಿಯೊಂದಿಗೆ ಜಿಲ್ಲಾಡಳಿತ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಜಿಲ್ಲೆಯ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರಾದ ಎಚ್‌.ಎಸ್‌.ಆನಂದ್‌ ಸೋಮವಾರ ಉದಯವಾಣಿಗೆ ತಿಳಿಸಿದರು.

ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಲಭ್ಯ : ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯಡಿ ವಿಮೆಗೆ ಪ್ರತಿ ವರ್ಷ 436 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ವರ್ಷಕ್ಕೆ ಕೇವಲ 20 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸೌಲಭ್ಯ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಲಭ್ಯವಿದ್ದು, ಒಂದು ವೇಳೆ ನೀವು ಈ ಎರಡು ಯೋಜನೆಗಳಡಿಯಲ್ಲಿ ನೋಂದಣಿ ಆಗದೇ ಹೋದಲ್ಲಿ ಕೂಡಲೇ ತಾವು ಖಾತೆ ಇರುವ ಬ್ಯಾಂಕ್‌ಗಳಿಗೆ ತೆರಳಿ ಈ ಎರಡು ಯೋಜನೆಗಳ ಬಗ್ಗೆ ವಿಚಾರಿಸಿ ಜೀವ ವಿಮೆ ಪಡೆದುಕೊಳ್ಳಬಹುದಾಗಿದೆ.

Advertisement

2 ಯೋಜನೆಯಡಿ ಜೀವ ವಿಮೆಗೆ ಪರಿಹಾರ ಏನು ಸಿಗುತ್ತೆ? : ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಎರಡನ್ನು ಜೀವ ವಿಮಾ ಯೋಜನೆಯಡಿ ನೋಂದಣಿ ಆಗಿ 50 ವರ್ಷದೊಳಗಿನ ವ್ಯಕ್ತಿ ಅಪಘಾತದಲ್ಲಿ ಒಂದು ವೇಳೆ ಮೃತಪಟ್ಟರೆ ಎರಡು ಜೀವ ವಿಮೆಗಳಿಂದ 4 ಲಕ್ಷ ರೂ. ಪರಿಹಾರ ಸಿಗುತ್ತದೆ. ಅಲ್ಲದೇ 436 ರೂ. ಶುಲ್ಕ ಪಾವತಿಸುವ ನೋಂದಣಿ ಆಗಿರುವ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯಡಿ ಯಾವುದೇ ರೀತಿ ವ್ಯಕ್ತಿ (ಅಪಘಾತ ಅಲ್ಲದೇ ಇದ್ದರೂ) ಮೃತಪಟ್ಟರೂ 2 ಲಕ್ಷ ರೂ. ಪರಿಹಾರ ಸಿಗುತ್ತದೆ. ವರ್ಷಕ್ಕೆ 20 ರೂ. ಶುಲ್ಕ ಪಾವತಿಸಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ನೋಂದಣಿ ಆದರೆ ಕೇವಲ ಅಪಘಾತದಲ್ಲಿ ಮೃತಪಟ್ಟರೆ ಮಾತ್ರ 2 ಲಕ್ಷ ಪರಿಹಾರ ಸಿಗುತ್ತದೆ.

ಬಡವರಿಗೆ ಅತಿ ಕಡಿಮೆ ಪ್ರೀಮಿಯಂನಡಿ ಭದ್ರತೆ : ಪಿಎಂ ಜೀವನ್‌ ಜ್ಯೋತಿ ಬಿಮಾ ಯೋಜನೆ ಹಾಗೂ ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ಹೆಚ್ಚು ನೋಂದಣಿ ಮಾಡಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಇಡೀ ರಾಷ್ಟ್ರದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಅತ್ಯಂತ ಹೆಮ್ಮೆ ಪಡುವ ವಿಚಾರ. ಅತ್ಯಂತ ಕಡಿಮೆ ಪ್ರೀಮಿಯಂಗೆ ಬಡ ಕುಟುಂಬಗಳಿಗೆ ಭದ್ರತೆ ಒದಗಿಸುವ ಯೋಜನೆಗಳಾಗಿವೆ ಎಂದು ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಉದಯವಾಣಿಗೆ ವಿವರಿಸಿದರು. ಎಷ್ಟೇ ಬಡತನ ಇದ್ದರೂ ಕೂಡ ಪ್ರೀಮಿಯಂ ಹಣವನ್ನು ಭರಿಸಬಹುದಾಗಿದೆ. ಇದರಿಂದ ಅಪಘಾತದ ಸಂದರ್ಭದಲ್ಲಿ ಅಥವಾ ಗಾಯಗೊಂಡ ಸಂದರ್ಭದಲ್ಲಿಗೆ ಅವರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಎರಡು ಜೀವ ವಿಮಾ ಯೋಜನೆಗಳು ಮಹತ್ವದಾಗಿವೆ. ಇದು ಕಡಿಮೆ ಪ್ರೀಮಿಯಂಗೆ 2 ಲಕ್ಷ ಪರಿಹಾರ ಒದಗಿಸುವ ವಿಮಾ ಯೋಜನೆ ಆಗಿರುವುದರಿಂದ ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳಿಗೆ ಇದು ಹೆಚ್ಚು ನೆರವಾಗಲಿದೆ. ಬೇರೆ ಜೀವ ವಿಮಾ ಯೋಜನೆಗಳಲ್ಲಿ ಪ್ರೀಮಿಯಂ ಸಾಕಷ್ಟು ದುಬಾರಿ ಆಗಿ ಸಾವಿರಾರು ರೂ. ಕಟ್ಟಬೇಕಾಗುತ್ತದೆ. ಬಡವರು ಭರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಎರಡು ಯೋಜನೆಗಳನ್ನು ಆಂದೋಲನದ ಮಾದರಿಯಲ್ಲಿ ಜಿಲ್ಲಾದ್ಯಂತ ಪ್ರಚಾರ ನಡೆಸಿ ಸ್ಥಳೀಯ ಗ್ರಾಪಂಗಳ ಮೂಲಕ ಅರಿವು ಮೂಡಿಸಿ ಜಿಲ್ಲೆಯ ಬ್ಯಾಂಕರ್‌ಗಳ ಸಹಾಯ ಪಡೆದು ಜಿಲ್ಲೆಯು ಈ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದರಿಂದ ಜಿಲ್ಲೆಯ ಸಾವಿರಾರು ಬಡ ಕುಟುಂಬಗಳಿಗೆ ನೆರವಾಗಲಿದೆಂದು ವಿವರಿಸಿದರು.

● ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next