ಹಾವೇರಿ: ಸಂಕಷ್ಟದ ಸಂದರ್ಭದಲ್ಲಿ ಕುಟುಂಬಸ್ಥರಿಗೆ ನೆರವಾಗಲಿ ಎನ್ನುವ ಸದುದ್ದೇಶದಿಂದ ಜಾರಿಗೊಳಿಸಿರುವ ಕಡಿಮೆ ಮೊತ್ತದ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ ಮಾಹಿತಿ ಕೊರತೆಯಿಂದ ಜಿಲ್ಲೆಯ ಬಹುತೇಕ ಬ್ಯಾಂಕ್‌ಖಾತೆದಾರರು ವಿಮಾ ಪರಿಹಾರದ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ(330ರೂ.) 89,684 ಜನರು ವಿಮಾ ಮಾಡಿಕೊಂಡಿದ್ದರೆ, 187 ಜನ ಅವಲಂಬಿತರು ಇದುವರೆಗೆ ಪರಿಹಾರ ಪಡೆದುಕೊಂಡಿದ್ದಾರೆ. ಅದೇ ರೀತಿ, ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆಯಡಿ(12ರೂ.) 3,08,345 ಜನರು ನೋಂದಣಿ ಮಾಡಿಕೊಂಡಿದ್ದರೆ,
74 ಜನ ಅವಲಂಬಿತರು ವಿಮಾ ಪರಿಹಾರ ಪಡೆದುಕೊಂಡಿದ್ದಾರೆ. ಹಲವರಿಗೆ ಈ ಯೋಜನೆ ಬಗ್ಗೆಹಾಗೂ ವಿಮೆ ಮಾಡಿಕೊಂಡಿರುವ ಕುರಿತು ತಿಳಿವಳಿ ಇರದ ಹಿನ್ನೆಲೆಯಲ್ಲಿ ಪರಿಹಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅತಿ ಕಡಿಮೆ ಮೊತ್ತದ ವಿಮೆ: ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(18 ರಿಂದ 50 ವರ್ಷದವರಿಗೆ) ಹಾಗೂ ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆಯಡಿ(18ರಿಂದ 70 ವರ್ಷದವರಿಗೆ)ಒಮ್ಮೆ ಅರ್ಜಿ ಸಲ್ಲಿಸಿದರೆ ಪ್ರತಿ ವರ್ಷ ತಮ್ಮ ಖಾತೆಯಿಂದ ಪ್ರಧಾನಮಂತ್ರಿ ಜೀವನ ಜ್ಯೋತಿಬಿಮಾ ಯೋಜನೆಯಡಿ 330 ರೂ. ಕಡಿತಗೊಂಡು ನವೀಕರಣವಾಗುತ್ತದೆ. ಯಾವುದೇ ಕಾರಣದಿಂದ ಮೃತಪಟ್ಟರೂ ಈ ಯೋಜನೆಯಡಿ ನಾಮಿನಿದಾರರಿಗೆ2 ಲಕ್ಷ ಪರಿಹಾರ ದೊರಕುತ್ತದೆ. ಪ್ರಸ್ತುತ ಕೊರೊನಾ ಸೋಂಕಿನಿಂದ ಮನೆಯ ಆಧಾರ ಸ್ತಂಭವಾಗಿದ್ದ ಹಲವರು ಮೃತಪಟ್ಟಿದ್ದಾರೆ. ಅಂತಹವರು ವಿಮಾ ಮಾಡಿಕೊಂಡಿದ್ದರೆ, ಆ ಕುಟುಂಬಸ್ಥರು ಸಂಬಂಧಪಟ್ಟ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿಕೊಂಡು ಪರಿಹಾರ ಪಡೆಯಬಹುದು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ.ತಿಳಿಸಿದ್ದಾರೆ.
ಇನ್ನು ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆಯಡಿ ಪ್ರತಿವರ್ಷ 12ರೂ. ವಿಮೆ ಮೊತ್ತ ಕಡಿತಗೊಳಿಸಲಾಗುತ್ತದೆ. ಈ ಯೋಜನೆಯಡಿ ಅಪಘಾತದಿಂದ ಮೃತಪಟ್ಟರೆ, ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದರೆ 2 ಲಕ್ಷ ರೂ. ಪರಿಹಾರ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ 1ಲಕ್ಷ ರೂ. ವಿಮಾಪರಿಹಾರ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಬ್ಯಾಂಕ್‌ಗೆ ತೆರಳಿ ಪಾಸ್‌ಬುಕ್ ಪರಿಶೀಲಿಸಿದರೆ ಮಾಹಿತಿ ಸಿಗುತ್ತದೆ. ನಂತರ ಅಗತ್ಯ ದಾಖಲೆಗಳನ್ನು ನೀಡಿದರೆ ವಿಮಾ ಪರಿಹಾರದಹಣ ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುತ್ತದೆ.
ಯೋಜನೆಗಳ ಮಾಹಿತಿ ಕೊರತೆ: ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆಗಳು ಅತಿ ಕಡಿಮೆ ಮೊತ್ತದ ವಿಮಾ ಯೋಜನೆಗಳಾಗಿವೆ. ಈಯೋಜನೆಗಳ ಸೌಲಭ್ಯದ ಕುರಿತು ತಿಳಿದುಕೊಂಡವರು ಅರ್ಜಿ ಸಲ್ಲಿಸಿ ವಿಮಾ ಮಾಡಿಕೊಂಡಿರುತ್ತಾರೆ. ನಂತರ ಪ್ರತಿವರ್ಷ ಸಂಬಂಧಪಟ್ಟ ಬ್ಯಾಂಕ್‌ನವರೇ ವಿಮೆಯನ್ನು ನವೀಕರಣ ಮಾಡುತ್ತಾರೆ. ಆದರೆ, ಸಂಬಂಧಪಟ್ಟವರ ಖಾತೆಯಲ್ಲಿ ಪ್ರತಿವರ್ಷ ವಿಮೆಮಾಡುವ ಸಂದರ್ಭದಲ್ಲಿ ವಿಮೆಗೆ ಅಗತ್ಯವಿರುವ ಹಣ ಜಮಾ ಇರುವಂತೆ ನೋಡಿಕೊಳ್ಳುವುದು ಖಾತೆದಾರರ ಜವಾಬ್ದಾರಿಯಾಗಿರುತ್ತದೆ. ಆದರೆ, ಬಹುತೇಕ ಜನರಿಗೆ ಈ ಯೋಜನೆಗಳ ಮಾಹಿತಿ ಕೊರತೆಯಿಂದ ವಿಮೆ ಪರಿಹಾರದ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಸಂಬಂಧಪಟ್ಟವರು ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಯಾವ ದಾಖಲೆಗಳು ಬೇಕು? : ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ್ದರೆ ಅವಲಂಬಿತ ಕುಟುಂಬಸ್ಥರು ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರ, ನಾಮಿನಿ ಮಾಹಿತಿ ಗುರುತಿಗೆ ಸಂಬಂಸಿದ ದಾಖಲೆ ಸಲ್ಲಿಸಿದರೆ 2 ಲಕ್ಷ ರೂ. ಪರಿಹಾರ ದೊರಕುತ್ತದೆ. ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆಯಡಿ ವಿಮೆ ಮಾಡಿಸಿದ್ದರೆ, ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರ, ನಾಮಿನಿಮಾಹಿತಿ ಗುರುತಿಗೆ ಸಂಬಂಧಿಸಿದ ದಾಖಲೆ, ಎಫ್‌ಐಆರ್ ಪ್ರತಿ, ಮರಣೋತ್ತರ ಪರೀಕ್ಷಾ ವರದಿ ದಾಖಲೆಗಳನ್ನು ಸಲ್ಲಿಸಿದರೆ 2 ಲಕ್ಷ ರೂ. ವಿಮೆ ಪರಿಹಾರ ಸಿಗುತ್ತದೆ. ಎರಡೂ ಯೋಜನೆಗಳ ವಿಮೆ ಮಾಡಿಸಿದ್ದರೆ ಎಲ್ಲ ದಾಖಲೆಗಳನ್ನು ನೀಡಿ 4 ಲಕ್ಷ ರೂ. ಪರಿಹಾರ ಪಡೆಯಬಹುದಾಗಿದೆ.
ಕೋವಿಡ್‌ನಿಂದ ಮೃತಪಟ್ಟರೂ ಪರಿಹಾರ : ಮನೆಯ ಆಧಾರ ಸ್ತಂಭವಾಗಿದ್ದ ಅನೇಕರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಂತಹವರು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆಗಳಡಿ ವಿಮಾ ಮಾಡಿಕೊಂಡಿದ್ದರೆ, ಆ ಕುಟುಂಬಸ್ಥರು ಸಂಬಂಧಪಟ್ಟ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿಕೊಂಡು ಪರಿಹಾರ ಪಡೆಯಬಹುದಾಗಿದೆ. ಆದರೆ, ಈ ಯೋಜನೆಗಳಡಿ ವಿಮಾ ಮಾಡಿಸಿಕೊಂಡವರಿಗೆ ಬಿಟ್ಟರೆ, ಮನೆಯ ಸದಸ್ಯರಿಗೆ ಗೊತ್ತಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಪಾಸ್‌ಬುಕ್‌ನೊಂದಿಗೆ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಬೇಕು. ವಿಮೆ ಮಾಡಿದ್ದರೆ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು.
ಪ್ರಸ್ತುತ ಕೊರೊನಾ ಸೋಂಕಿನಿಂದ ಮನೆಯ ಆಧಾರ ಸ್ತಂಭವಾಗಿದ್ದ ಹಲವರು ಮೃತಪಟ್ಟಿದ್ದಾರೆ. ಅಂತಹವರು ಈ ಯೋಜನೆಗಳಡಿ ವಿಮಾ ಮಾಡಿಕೊಂಡಿದ್ದರೆ ಆ ಕುಟುಂಬಸ್ಥರು ಸಂಬಂಧಪಟ್ಟ ಬ್ಯಾಂಕ್ ಗೆ ಭೇಟಿ ನೀಡಿ ಪರಿಹಾರ ಪಡೆಯಬಹುದು. ಈಗಾಗಲೇ ಈ ಎರಡೂ ಯೋಜನೆಗಳಡಿ ದಾಖಲಾತಿ ಮಾಡಿದ ಗ್ರಾಹಕರ ಖಾತೆಯಿಂದ ಜೂ.30 ರಂದು ನವೀಕರಣದ ವಾರ್ಷಿಕ ಮೊತ್ತ ಕಡಿತಗೊಳಿಸಲಾಗುತ್ತಿದೆ. ವಿಮೆಗೆ ಬೇಕಾದ ಮೊತ್ತವನ್ನು ತಮ್ಮ ಉಳಿತಾಯ ಖಾತೆಯಲ್ಲಿ ಜಮಾ ಮಾಡಿರಬೇಕು.-
ಪ್ರಭುದೇವ ಎನ್.ಜಿ., ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್
-ವೀರೇಶ ಮಡ್ಲೂರ