Advertisement

ಪಿಎಂ ಕಿಸಾನ್‌ ಯೋಜನೆ –ಬೆಳೆ ಸಾಲ ಅರ್ಜಿಯಲ್ಲಿ ಭಾರೀ ಅಂತರ!

10:07 AM Feb 08, 2020 | Hari Prasad |

ಉಡುಪಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಸಂಖ್ಯೆಗೂ ಬೆಳೆ ಸಾಲ ಪಡೆದ ರೈತರ ಸಂಖ್ಯೆಗೂ ಭಾರೀ ವ್ಯತ್ಯಾಸವಿರುವ ಕಾರಣ ಸರಕಾರದ ನಿರ್ದೇಶನದಂತೆ ಫೆ. 8ರಿಂದ 24ರವರೆಗೆ ಬೆಳೆ ಸಾಲ ಅಭಿಯಾನವನ್ನು ಎಲ್ಲ ಬ್ಯಾಂಕುಗಳೂ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕ ರುದ್ರೇಶ್‌ ಮತ್ತು ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕೇಂದ್ರ ಸರಕಾರದ 6,000 ರೂ., ರಾಜ್ಯ ಸರಕಾರದ 4,000 ರೂ. ನೆರವು ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನಾಲ್ಕು ಕಂತುಗಳಲ್ಲಿ ಸಿಗಲಿದೆ. ಜಿಲ್ಲೆಯಲ್ಲಿ 1,34,217 ರೈತರು ಅರ್ಜಿ ಸಲ್ಲಿಸಿದ್ದು ಕೆಲವರಿಗೆ ಎರಡು, ಮೂರು ಕಂತುಗಳು ಸಿಕ್ಕಿವೆ. ಕೆಲವರಿಗೆ ಕೊನೆಯ ಕಂತೂ ಬಂದಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವೇ ಮಂದಿಗೆ ಬಂದಿಲ್ಲ; ಅದನ್ನು ಪರಿಹರಿಸಲಾಗುತ್ತಿದೆ. ಆದರೆ ರಾಷ್ಟ್ರೀಕೃತ, ಗ್ರಾಮೀಣ, ಡಿಸಿಸಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದುಕೊಂಡವರು ಕೇವಲ 30,940 ರೈತರು. ರೈತರಾಗಿ ಅರ್ಜಿ ಸಲ್ಲಿಸಿದ 1,03,277 ಮಂದಿಗೆ ಬೆಳೆ ಸಾಲ ಸಿಗಲಿಲ್ಲ ಎಂಬ ಸೂಚನೆ ಇದು ಎಂದರು.

ಬ್ಯಾಂಕ್‌ನವರು ಸಾಲ ಕೊಡುತ್ತಿದ್ದಾರೋ ಇಲ್ಲವೋ? ಮಾಹಿತಿ ಕೊರತೆಯೋ ಎಂಬ ಸಂಶಯ ಮೂಡುತ್ತಿದೆ. ಬ್ಯಾಂಕ್‌ನವರಿಗೆ ಬೆಳೆ ಸಾಲ ಕೊಡಲು ಸೂಚನೆ ನೀಡಲಾಗಿದೆ. ಇನ್ನೊಮ್ಮೆ ಸಭೆ ಕರೆದು ಯಾವುದೇ ವಿಳಂಬವಿಲ್ಲದೆ ಸಾಲ ಕೊಡಲು ಸೂಚನೆ ನೀಡಲಾಗುವುದು. ಅಭಿಯಾನದ ಅವಧಿಯಲ್ಲಿ ರೈತರು ಬೆಳೆಸಾಲಕ್ಕೆ ಹೆಸರು ನೋಂದಾಯಿಸಬಹುದು. ಕಡಿಮೆ ಜಾಗವಿದ್ದವರಿಗೂ ಸಾಲ ನೀಡಲಾಗುವುದು. ಅಗತ್ಯವಿರುವವರಿಗೆ ಸಾಲ ಸಿಗುವುದಿಲ್ಲ ಎಂದಾಗಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬ್ಯಾಂಕ್‌ ಅಧಿಕಾರಿಗಳು ಬೆಳೆ ಸಾಲ ನೀಡುವುದಿಲ್ಲ ಎಂದು ಹೇಳಿದರೆ, ಅನಗತ್ಯವಾಗಿ ವಿಳಂಬ ಮಾಡಿದರೆ ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕ ರುದ್ರೇಶ್‌ (9449860858), ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ (8277932500), ಉಪನಿರ್ದೇಶಕ ಚಂದ್ರಶೇಖರ್‌ (8277932501) ಅವರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next