Advertisement

ಭಾರತದ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ

06:20 AM Nov 30, 2018 | Team Udayavani |

ಸಿಡ್ನಿ: ಮಳೆಯ ಕಾಟವಿಲ್ಲದೆ ನಿರ್ವಿಘ್ನವಾಗಿ ನಡೆದ ಅಭ್ಯಾಸ ಪಂದ್ಯದ ದ್ವಿತೀಯ ದಿನದಾಟದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದೆ. ಐವರ ಅರ್ಧ ಶತಕ ಟೀಮ್‌ ಇಂಡಿಯಾ ಸರದಿಯ ಆಕರ್ಷಣೆಯಾಗಿತ್ತು.

Advertisement

92 ಓವರ್‌ಗಳ ಆಟದಲ್ಲಿ ಕೊಹ್ಲಿ ಪಡೆ 358 ರನ್‌ ಗಳಿಸಿ ಆಲೌಟ್‌ ಆದರೆ, ಜವಾಬಿತ್ತ “ಕ್ರಿಕೆಟ್‌ ಆಸ್ಟ್ರೇಲಿಯ ಇಲೆವೆನ್‌’ ವಿಕೆಟ್‌ ನಷ್ಟವಿಲ್ಲದೆ 24 ರನ್‌ ಮಾಡಿದೆ. ಮೊದಲ ದಿನದಾಟ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.

ರಾಹುಲ್‌ ಮಾತ್ರ ವಿಫ‌ಲ
ಭಾರತದ ಸರದಿಯಲ್ಲಿ ಆರಂಭಕಾರ ಕೆ.ಎಲ್‌. ರಾಹುಲ್‌ ಹೊರತು ಪಡಿಸಿ ಉಳಿದವರೆಲ್ಲರ ಆಟ ರಂಜನೀಯವಾಗಿತ್ತು. ರಾಹುಲ್‌ 18 ಎಸೆತ ಎದುರಿಸಿ ಕೇವಲ 3 ರನ್‌ ಮಾಡಿ ತಮ್ಮ ವೈಫ‌ಲ್ಯವನ್ನು ತೆರೆದಿಟ್ಟರು. “ಲೂಸ್‌ ಡ್ರೈವ್‌’ಗೆ ಮುಂದಾದ ಅವರು ಮಿಡ್‌-ಆಫ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. “ಟೀನೇಜ್‌ ಸೆನ್ಸೇಶನ್‌’ ಪೃಥ್ವಿ ಶಾ 66, ಚೇತೇಶ್ವರ್‌ ಪೂಜಾರ 54, ನಾಯಕ ವಿರಾಟ್‌ ಕೊಹ್ಲಿ 64, ಅಜಿಂಕ್ಯ ರಹಾನೆ 56, ಹನುಮ ವಿಹಾರಿ 53 ರನ್‌ ಹೊಡೆದು ಅರ್ಧ ಶತಕಕ್ಕೆ ಸಾಕ್ಷಿಯಾದರು.

7ನೇ ಕ್ರಮಾಂಕದಲ್ಲಿ ಆಡಲಿಳಿದ ರೋಹಿತ್‌ ಶರ್ಮ 40 ರನ್‌ ಮಾಡಿದರು. ರಿಷಬ್‌ ಪಂತ್‌ 11 ರನ್‌ ಮಾಡಿ ಔಟಾಗದೆ ಉಳಿದರೆ, ಆರ್‌. ಅಶ್ವಿ‌ನ್‌, ಮೊಹಮ್ಮದ್‌ ಶಮಿ ಮತ್ತು ಉಮೇಶ್‌ ಯಾದವ್‌ ಖಾತೆ ತೆರೆಯಲು ವಿಫ‌ಲರಾದರು. ಹೀಗಾಗಿ ಭಾರತದ ಕೊನೆಯ 5 ವಿಕೆಟ್‌ 11 ರನ್‌ ಅಂತರದಲ್ಲಿ ಉದುರಿತು. ಮಧ್ಯಮ ವೇಗಿ ಆರನ್‌ ಹಾರ್ಡಿ 4 ವಿಕೆಟ್‌ ಕಿತ್ತು ಮಿಂಚಿದರು.

ಸ್ಕೋರ್‌ 16 ರನ್‌ ಆಗಿದ್ದಾಗ ರಾಹುಲ್‌ ವಿಕೆಟ್‌ ಕಿತ್ತ ಕೋಲ್‌ಮಾÂನ್‌ ಆತಿಥೇಯ ತಂಡಕ್ಕೆ ಮೇಲುಗೈ ಒದಗಿಸಿದರು. ಈ ಹಂತದಲ್ಲಿ ಜತೆಗೂಡಿದ ಶಾ-ಪೂಜಾರ 80 ರನ್‌ ಜತೆಯಾಟ ನಿಭಾಯಿಸಿದರು. ಬಿರುಸಿನ ಬ್ಯಾಟಿಂಗಿಗೆ ಇಳಿದ ಶಾ 69 ಎಸೆತಗಳಿಂದ ಸರ್ವಾಧಿಕ 66 ರನ್‌ ಹೊಡೆದರು (11 ಬೌಂಡರಿ). ಪೂಜಾರ ಗಳಿಕೆ 89 ಎಸೆತಗಳಿಂದ 54 ರನ್‌ (6 ಬೌಂಡರಿ). ಪೂಜಾರ-ಕೊಹ್ಲಿ ಜತೆಯಾಟದಲ್ಲಿ 73 ರನ್‌ ಒಟ್ಟುಗೂಡಿತು. ತಮ್ಮ ಪ್ರಚಂಡ ಫಾರ್ಮ್ ಮುಂದುವರಿಸಿದ ಕೊಹ್ಲಿ 87 ಎಸೆತಗಳಿಂದ 64 ರನ್‌ ಬಾರಿಸಿದರು. ಇದರಲ್ಲಿ 7 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು.

Advertisement

ಅಜಿಂಕ್ಯ ರಹಾನೆ ಅವರದು ಎಚ್ಚರಿಕೆಯ ಆಟವಾಗಿತ್ತು. 56 ರನ್ನಿಗೆ ಅವರು 123 ಎಸೆತ ನಿಭಾಯಿಸಿದರು. ಹೊಡೆದದ್ದು ಒಂದೇ ಫೋರ್‌. ಹನುಮ ವಿಹಾರಿ 88 ಎಸೆತಗಳಿಂದ 53 ರನ್‌ ಮಾಡಿದರೆ (5 ಬೌಂಡರಿ), ರೋಹಿತ್‌ ಶರ್ಮ 55 ಎಸೆತ ಎದುರಿಸಿ 40 ರನ್‌ ಗಳಿಸಿದರು (5 ಬೌಂಡರಿ, 1 ಸಿಕ್ಸರ್‌).

14 ಆಟಗಾರರ ಬಳಗ
ಪ್ರಥಮ ದರ್ಜೆ ಮಾನ್ಯತೆ ಇಲ್ಲದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ತಂಡ ಭಾರತವನ್ನು ಬ್ಯಾಟಿಂಗಿಗೆ ಇಳಿಸಿತ್ತು. ಭಾರತ 14ರ ಬಳಗದಿಂದ ಭುವನೇಶ್ವರ್‌, ಬುಮ್ರಾ, ಪಾರ್ಥಿವ್‌ ಮತ್ತು ಕುಲದೀಪ್‌ ಅವರನ್ನು ಹೊರಗಿರಿಸಿದೆ. ವಿಜಯ್‌, ಇಶಾಂತ್‌ ಮತ್ತು ಜಡೇಜ ಅವರಿಗೆ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಭಾರತ-358 (ಶಾ 66, ಪೂಜಾರ 54, ಕೊಹ್ಲಿ 64, ರಹಾನೆ 56, ವಿಹಾರಿ 53, ರೋಹಿತ್‌ 40, ಹಾರ್ಡಿ 50ಕ್ಕೆ 4). ಕ್ರಿಕೆಟ್‌ ಆಸ್ಟ್ರೇಲಿಯ ಇಲೆವೆನ್‌-ವಿಕೆಟ್‌ ನಷ್ಟವಿಲ್ಲದೆ 24.

ಪೃಥ್ವಿ ಶಾ ಜತೆ ಸೆಲ್ಫಿ; ಅಭಿಮಾನಿಗಳ ದಂಡು
ಭಾರತದ ಯುವ ಆರಂಭಕಾರ ಪೃಥ್ವಿ ಶಾ ಕೇವಲ 2 ಟೆಸ್ಟ್‌ ಆಡುವುದರೊಳಗಾಗಿ ಆಸ್ಟ್ರೇಲಿಯದಲ್ಲಿ ಸೂಪರ್‌ಸ್ಟಾರ್‌ ಆಗಿ ಮೆರೆಯುತ್ತಿದ್ದಾರೆ. ಇದಕ್ಕೆ ಸಿಡ್ನಿ ಅಭ್ಯಾಸ ಪಂದ್ಯದ ವೇಳೆ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆಯಲು ಮುಗಿಬಿದ್ದುದೇ ಸಾಕ್ಷಿ.

ಅಭ್ಯಾಸ ಪಂದ್ಯದಲ್ಲಿ 69 ಎಸೆತಗಳಿಂದ 66 ರನ್‌ ಸಿಡಿಸುವ ಮೂಲಕ ಮುಂಬರುವ ಟೆಸ್ಟ್‌ ಸರಣಿಗೆ ಉತ್ತಮ ತಾಲೀಮು ನಡೆಸಿದ ಶಾ, ಬಹಳ ತಾಳ್ಮೆ ಹಾಗೂ ಅತ್ಯಂತ ಖುಷಿಯಿಂದ ಸಿಡ್ನಿ ಕ್ರಿಕೆಟ್‌ ಅಂಗಳದಲ್ಲಿ ಅಭಿಮಾನಿಗಳೊಂದಿಗೆ ಬೆರೆತರು. ಎಷ್ಟು ಸಾಧ್ಯವೋ ಅಷ್ಟು ಸೆಲ್ಫಿ ತೆಗೆದುಕೊಳ್ಳಲು ಅವಕಾಶವಿತ್ತರು. ಬಿಸಿಸಿಐ ಇದನ್ನು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next