Advertisement

ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಕ್ರಮ : ಸಚಿವ ಪ್ರಭು ಚವ್ಹಾಣ್

07:01 PM Aug 12, 2021 | Team Udayavani |

ಬೆಂಗಳೂರು : ಎರಡನೆಯ ಅವಧಿಗೆ ಪಶುಸಂಗೋಪನೆ ಇಲಾಖೆಯ ಜವಾಬ್ದಾರಿ ದೊರೆತಿದ್ದು ನನ್ನ ಸೌಭಾಗ್ಯ. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಹಾಗೂ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಲು ಕ್ರಮಕೈಗೊಳ್ಳುತ್ತೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಲವಾರು ಗೋ ಪ್ರಿಯರು ಅಕ್ರಮ ಕಸಾಯಿಖಾನೆಗಳು ನಡೆಯುತ್ತಿರುವ ಕುರಿತು ಕರೆ ಮಾಡುತ್ತಿದ್ದಾರೆ. ಗೃಹ ಇಲಾಖೆಯ ಸಹಯೋಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಾಜ್ಯಾದ್ಯಂತ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಬಕ್ರೀದ್ ಸಮಯದಲ್ಲಿ ಸುಮಾರು 6000ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಲಾಗಿದ್ದು ಈ ಕಾರ್ಯಕ್ಕೆ ಸಹಕರಿಸಿದ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರು, ಗೃಹ ಇಲಾಖೆಯ ಸಿಬ್ಬಂದಿ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಪಶು ಲೋಕ ಸ್ಥಾಪನೆಗೆ ಕ್ರಮ
ದೇಶದಲ್ಲಿಯೇ ಅತ್ಯಂತ ವಿಶಿಷ್ಟವಾದ ಪಶು ಲೋಕ ಸ್ಥಾಪನೆ ಕರ್ನಾಟಕದಲ್ಲಿ ನಿರ್ಮಾಣ ಮಾಡಲು ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು ಈ ಕುರಿತಾಗಿ ಐದು ತಿಂಗಳು ಕಳೆದರೂ ಯಾವುದೇ ಪ್ರಗತಿ ಆಗದಿರುವುದಕ್ಕೆ ಸಚಿವರು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲಾಖೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾದರೆ ಸಹಿಸುವುದಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗೋಶಾಲೆ ಕೆಲಸ ಪೂರ್ಣಗೊಳಿಸಿ ಜಿಲ್ಲೆಗೊಂದು ಗೋಶಾಲೆ ತೆರೆಯಲು ಸ್ಥಳ ಗುರುತಿಸುವ ಕಾರ್ಯ ಪ್ರತಿ ಜಿಲ್ಲೆಯಲ್ಲಿ ನಡೆಯುತ್ತಿದೆ.

Advertisement

ಇದನ್ನೂ ಓದಿ :ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಕ್ಟೋಬರ್ 2 ಗಾಂಧಿ ಜಯಂತಿಯ ಸಮಯದಲ್ಲಿ ಜಿಲ್ಲೆಗೊಂದು ಗೋಶಾಲೆ ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿರುವುದರಿಂದ ಕೆಲಸವನ್ನು ಆದಷ್ಟು ವೇಗವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಶು ಸಂಜೀವಿನಿ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಇನ್ನು 15 ಜಿಲ್ಲೆಗಳಿಗೆ ಪಶುಶಸ್ತ್ರ ಚಿಕಿತ್ಸಾವಾಹನ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅತೀ ಶೀಘ್ರದಲ್ಲೇ ಉಳಿದ ಜಿಲ್ಲೆಗಳಿಗೆ ಮತ್ತು ಬೆಂಗಳೂರು ಸೇರಿ 25 ಪಶುಸಂಜೀವಿನಿ ನೀಡಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ಎನ್.ಜಿ.ಓ ಗಳು ಪಶುವೈದ್ಯರ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಲಾಖೆಯ ವೈದ್ಯರು ಹಾಗೂ ಅಧಿಕಾರಿಗಳು ಧೈರ್ಯದಿಂದ ಕೆಲಸಮಾಡಬೇಕು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಅನಾವಶ್ಯಕವಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸಚಿವರು ಕಿಡಿ ಕಾರಿದ್ದಾರೆ.

ಪಶುಸಂಗೋಪನೆ ಇಲಾಖೆಯಲ್ಲಿ ಇನ್ನೂ ಹಲವು ವಿನೂತನ ಯೋಜನೆಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆ ಇದ್ದು ಸದ್ಯದಲ್ಲಿಯೇ ಇಲಾಖಾ ಹಂತದಲ್ಲಿ ಚರ್ಚೆ ನಡೆಸಿ ರೈತರ ಪರ ಯೋಜನೆಗಳನ್ನು ರೂಪಿಸುವುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next