ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕನಸಿನ ಪಾತ್ರದ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತಾರೆ. ಅವರಷ್ಟೇ ಅಲ್ಲ, ಪ್ರಕಾಶ್ ರೈ ಕೂಡ ಆ ಪಾತ್ರದ ಕುರಿತು ಸಾಕಷ್ಟು ಸಲ ಹೇಳಿದ್ದು ಉಂಟು. ಈಗ ರಜನಿಕಾಂತ್ ಅವರ ಕನಸಿನ ಪಾತ್ರದಲ್ಲಿ ತಮಿಳು ನಟರೊಬ್ಬರು ಕಾಣಿಸಿಕೊಂಡಿದ್ದಾರೆ. ಹೌದು, ರಜನಿಕಾಂತ್ ಹಾಗು ಪ್ರಕಾಶ್ ರೈ ಅವರ ಕನಸಿನ ಪಾತ್ರ ಬೇರಾವುದೂ ಅಲ್ಲ. ಅದು, ದಳವಾಯಿ ಮುದ್ದಣ್ಣ.
ಅಂದಹಾಗೆ, ಈ ಪಾತ್ರ ಮಾಡಿರೋದು “ಬಾಹುಬಲಿ’ ಖ್ಯಾತಿಯ ಪ್ರಭಾಕರ್. ಕನ್ನಡದಲ್ಲಿ ತಯಾರಾಗುತ್ತಿರುವ ಡಾ.ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ “ಬಿಚ್ಚುಗತ್ತಿ’ ಚಿತ್ರದಲ್ಲಿ ಪ್ರಭಾಕರ್ ಅವರು ದಳವಾಯಿ ಮುದ್ದಣ್ಣ ಪಾತ್ರ ಮಾಡಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಈ ಚಿತ್ರದಲ್ಲಿ ಭರಮಣ್ಣನಾಗಿ ರಾಜವರ್ಧನ್ ಅವರು ಕಾಣಿಸಿಕೊಂಡಿದ್ದಾರೆ. ಸಿದ್ಧಾಂಬೆ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ.
ಉಳಿದಂತೆ ಚಿತ್ರದಲ್ಲಿ “ಸ್ಪರ್ಶ’ ರೇಖಾ, ಶಿವರಾಂ, ಶರತ್‌ಲೋಹಿತಾಶ್ವ, “ಡಿಂಗ್ರಿ’ ನಾಗರಾಜ್, ರಮೇಶ್ ಪಂಡಿತ್, ಪ್ರಕಾಶ್ ಹೆಗ್ಗೊಡು, ಕಲ್ಯಾಣಿ, ಶ್ರೀನಿವಾಸಮೂರ್ತಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಈ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರ ದಳವಾಯಿ ಮುದ್ದಣ್ಣ ಪಾತ್ರದಲ್ಲಿ ಪ್ರಭಾಕರ್ ನಟಿಸಿದ್ದು, ಆ ಪಾತ್ರ ಚಿತ್ರದ ಹೈಲೈಟ್‌ಗಳಲ್ಲೊಂದು ಎಂಬುದು ಚಿತ್ರತಂಡದ ಮಾತು. “ಬಿಚ್ಚುಗತ್ತಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಇಷ್ಟರಲ್ಲೇ ಸಿಜಿ ಕೆಲಸ ಮುಗಿಯಲಿದ್ದು, ಬಿಡುಗಡೆಗೆ ತಯಾರಿ ಮಾಡಿಕೊಳುತ್ತಿದೆ.
ಚಿತ್ರದ ಇನ್ನೊಂದು ವಿಶೇಷವೆಂದರೆ, 16 ನೇ ಶತಮಾನಕ್ಕೆ ಕೊಂಡೊಯ್ಯುವ ಮೇಕಿಂಗ್ ನೋಡಿದ ದಕ್ಷಿಣ ಭಾರತದ ಹೆಸರಾಂತ ತಂತ್ರಜ್ಞರೊಬ್ಬರು, ತಮ್ಮ ನೇತೃತ್ವದಲ್ಲಿ ಚಿತ್ರದ ಗ್ರಾಫಿಕ್ಸ್ ಹಾಗು ಪೋಸ್ಟ್‌ಪ್ರೊಡಕ್ಷನ್ಸ್ ಕೆಲಸದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆ ಹೆಸರಾಂತ ತಂತ್ರಜ್ಞರು ಯಾರೆಂಬುದನ್ನು ಚಿತ್ರತಂಡ ಇಷ್ಟರಲ್ಲೇ ಕೆಲಸ ಪೂರ್ಣಗೊಂಡ ಬಳಿಕ ಹೇಳಲಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುವ ಯೋಚನೆ ತಂಡಕ್ಕಿದೆ. ಡಿಸೆಂಬರ್‌ನಲ್ಲಿ ಆಡಿಯೋ ಬಿಡುಗಡೆಗೆ ಜೋರು ತಯಾರಿ ನಡೆಯುತ್ತಿದೆ.