ಬನಹಟ್ಟಿ: ಕೋವಿಡ್ ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿದೆ. ಈ ರೋಗದಿಂದ ರಕ್ಷಿಸಿಕೊಳ್ಳಲು ಪಿಪಿಇ ಕಿಟ್ ಅವಶ್ಯವಾಗಿದ್ದು, ಈ ಕಿಟ್ ತಯಾರಿಕೆಗೆ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಐಶ್ವರ್ಯ ಟೆಕ್ಸ್ಟ್ ಟೈಲ್ಸ್ ಮಾಲೀಕರಾದ ಸತೀಶ ಹಜಾರೆ ಮುಂದಾಗಿದ್ದು, ಇದು ಜಿಲ್ಲೆಯಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕೋವಿಡ್-19 ವೈರಸ್ ಸಾಂಕ್ರಾಮಿಕವಾಗಿದ್ದು, ಇದರ ರಕ್ಷಣೆಗೆ ಸುರಕ್ಷತೆಯೊಂದೇ ಮೂಲ ಅಸ್ತ್ರ. ಹೀಗಾಗಿ ಈ ಭಾಗದ ಆಸ್ಪತ್ರೆಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಪಿಪಿಇ ಕಿಟ್ ಉಪಯೋಗಿಸಲಾಗುತ್ತಿದೆ. ಬೆಂಗಳೂರು ಗಾರ್ಮೆಂಟ್ಸ್ ಉದ್ಯೋಗಕ್ಕೆ ಹೆಸರುವಾಸಿಯಾದರೆ ಇದೀಗ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನೇಕಾರಿಕೆಯೊಂದಿಗೆ ಗಾರ್ಮೆಂರ್ಟ್ಸ್ ಗೆ ಹೆಚ್ಚಿನ ಒಲವು ತೋರುತ್ತಿರುವುದು ಕಂಡುಬರುತ್ತಿದೆ.
ಸ್ಥಳೀಯ ವೈದ್ಯರೊಬ್ಬರು ತಮಗೆ ಪಿಪಿಇ ಕಿಟ್ ಅವಶ್ಯವಿರುವುದನ್ನು ರಬಕವಿಯ ಐಶ್ವರ್ಯ ಟೆಕ್ಸಟೈಲ್ಸ್ ಮಾಲೀಕರಾದ ಸತೀಶ ಹಜಾರೆ ಅವರಿಗೆ ತಿಳಿಸಿದಾಗ ಅವರು ಅದಕ್ಕೆ ಬೇಕಾಗುವ ಅಗತ್ಯ ಬಟ್ಟೆಗಳನ್ನು ಖರೀದಿಸಿ ತಯಾರಿಸಿ ಅವರಿಗೆ ವಿತರಿಸಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಆರ್ಥಿಕತೆ ಉತ್ತೇಜನಕ್ಕಾಗಿ ಕೋವಿಡ್-19ನ ಲಾಕ್ ಡೌನ್ ನಿಯಮಾವಳಿಗಳಲ್ಲಿ ಕೆಲವೊಂದು ಸರಳೀಕರಣಗೊಳಿಸಿದ್ದು, ಮಹಿಳಾ ಪ್ರಧಾನ ಉದ್ಯೋಗವಾಗಿರುವ ಗಾರ್ಮೆಂಟ್ಸ್ ಉದ್ಯೋಗ ಕಳೆದೊಂದು ವಾರದಿಂದ ಚೇತರಿಕೆಯಾಗಿದೆ. ಐಶ್ವರ್ಯ ಟೆಕ್ ಟೈಲ್ಸ್‌ನವರು ಗಾರ್ಮೆಂಟ್ ಕೆಲಸಕ್ಕೂ ಮುಂದಾಗಿ ಇಲ್ಲಿನ ಬಹಳಷ್ಟು ಜನರಿಗೆ ಉದ್ಯೋಗ ನೀಡಿ ಆಸರೆಯಾಗಿದ್ದಾರೆ.
ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿನ ಆಸ್ಪತ್ರೆಯ ವೈದ್ಯರಿಗೆ ಅಗತ್ಯವಿರುವ ಸಾವಿರಕ್ಕೂ ಅಧಿಕ ಪಿಪಿಇ ಕಿಟ್‌ಗಳನ್ನು ಕೇವಲ 500 ರಿಂದ 600 ರೂ.ಗಳಿಗೆ ಒದಗಿಸುತ್ತಿರುವುದು ವಿಶೇಷ. ಅಲ್ಲದೆ ಇದರ ಜೊತೆ ಗಾರ್ಮೆಂಟ್ಸ್‌ನಲ್ಲಿ ಮಾಸ್ಕ್ ತಯಾರಿಕೆ ಮಾಡುತ್ತಿದ್ದಾರೆ. ಜೊತೆಗೆ ಇದನ್ನು ಅಭಿವೃದ್ಧಿ ಪಡಿಸುವ ಯೋಜನೆ ಹೊಂದಿರುವುದಾಗಿ ಅವರು ತಿಳಿಸುತ್ತಾರೆ.
ನೂರಾರು ಕುಟುಂಬಗಳಿಗೆ ಆಸರೆ: ನೇಕಾರಿಕೆಯೊಂದಿಗೆ ಇದೀಗ ಗಾರ್ಮೆಂಟ್ಸ್ ನತ್ತ ಮುಖ ಮಾಡಿರುವ ಕೆಲ ಉದ್ಯಮಿಗಳಿಂದ ನೂರಾರು ಮಹಿಳಾ ಪ್ರಧಾನ ಕುಟುಂಬಗಳಿಗೆ ಆಸರೆಯಾಗುತ್ತಿವೆ. ತಿಂಗಳಿಗೆ 5 ರಿಂದ 9 ಸಾವಿರ ರೂ. ವರೆಗೂ ವೇತನ ಪಡೆಯಬಹುದಾಗಿದ್ದು, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗುವಲ್ಲಿ ಇಂತಹ ಗಾರ್ಮೆಂಟ್ಸ್ ಗಳು ಸಹಕಾರಿಯಾಗುತ್ತಿವೆ.
ಸ್ಕ್ರೀನಿಂಗ್‌ಗೆ ಒಳಪಡಿಸಿ ಗಾರ್ಮೆಂಟ್ಸ್ ಕೆಲಸಕ್ಕೆ ಕೆಲಸಗಾರರು ಬರುತ್ತಿದ್ದಾರೆ. ಗಾರ್ಮೆಂಟ್ಸ್‌ಗಳಲ್ಲಿ ಸ್ಯಾನಿಟೈಸರ್‌ಗಳ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಸ್ಕ್ಗಳನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅನುಕೂಲವಾಗಲಿದೆ.
-ಸತೀಶ ಹಜಾರೆ, ಐಶ್ವರ್ಯ ಟೆಕ್ಸ್‌ಟೈಲ್ಸ್ ಮಾಲೀಕ
-ಕಿರಣ ಶ್ರೀಶೈಲ ಆಳಗಿ