Advertisement

ರಾಷ್ಟ್ರಮಟ್ಟದ ಸಾಧನೆ ಮಾಡಿದ ಸ್ವಾತಿ

06:30 AM Mar 26, 2018 | Team Udayavani |

ಕಾರ್ಕಳ: ಕ್ರೀಡಾ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲೇ ರಾಷ್ಟ್ರಮಟ್ಟದ ಸಾಧನೆ ಮಾಡಿದವರು ವಿರಳ. ಕ್ರೀಡೆಯಲ್ಲಿ ಸಾಧಿಸಲು ಅನೇಕ ವರ್ಷಗಳ ತರಬೇತಿ ಪಡೆಯಬೇಕಾಗುತ್ತದೆ. ಆದರೆ ಕೇವಲ ಏಳು ತಿಂಗಳ ಅಭ್ಯಾಸದಲ್ಲಿಯೇ ಕಾರ್ಕಳದ ಪವರ್‌ ಲಿಫ್ಟಿಂಗ್‌ ಪಟು ಸ್ವಾತಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ .

Advertisement

ಕಳೆದ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ವಾತಿ 2 ಚಿನ್ನ ಪಡೆದಿದ್ದರು. ಅನಂತರ ಇತ್ತೀಚೆಗೆ ರಾಂಚಿಯಲ್ಲಿ ನಡೆದ ರಾಷ್ಟ್ರಮಟ್ಟದ 57 ಕೆ.ಜಿ. ವಿಭಾಗದ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕ ಪಡೆದು ರಾಷ್ಟ್ರಮಟ್ಟದಲ್ಲೂ ಮಿಂಚಿದ್ದಾರೆ. 

ಕಾರ್ಕಳದ ಎಸ್‌ವಿಟಿ ಕಾಲೇಜಿನ ಹಳೆ ವಿದ್ಯಾರ್ಥಿನಿ ಯಾಗಿರುವ ಸ್ವಾತಿ ಕಾಲೇಜಿನಲ್ಲಿರುವಾಗ ರೆಸ್ಲಿಂಗ್‌, ಜಿಮ್‌ ಅಭ್ಯಾಸ ನಡೆಸುತ್ತಿದ್ದರು. ಮಂಗಳೂರು ವಿವಿಯ ಅಂತರ್‌ ಕಾಲೇಜು ಮಟ್ಟದ ಕುಸ್ತಿಯಲ್ಲಿ ಒಂದು ಚಿನ್ನ ಹಾಗೂ ಕಂಚಿನ ಪದಕ ಗೆದ್ದ ಕೀರ್ತಿಯೂ ಸ್ವಾತಿಯದ್ದಾಗಿದೆ.

ಪವರ್‌ ಲಿಫ್ಟಿಂಗ್‌ ಆಸಕ್ತಿ
ಪವರ್‌ಲಿಫ್ಟಿಂಗ್‌ನಲ್ಲಿ ಪ್ರದೀಪ್‌ ಕುಮಾರ್‌, ವಿಶ್ವನಾಥ ಭಾಸ್ಕರ್‌ ಗಾಣಿಗ ಅವರ ಸಾಧನೆ ನೋಡಿ ಸ್ಫೂರ್ತಿಗೊಂಡಿದ್ದೆ. ಹೀಗಾಗಿ ಪವರ್‌ ಲಿಫ್ಟಿಂಗ್‌ನಲ್ಲಿ ಮತ್ತಷ್ಟು ಆಸಕ್ತಿ ಹುಟ್ಟಿಕೊಂಡಿದೆ. ಪ್ರದೀಪ್‌ ಅವರಿಂದಲೇ ತರಬೇತಿ ಪಡೆಯುತ್ತಿದ್ದೇನೆ. ತರಬೇತಿಗಾಗಿ ಪ್ರತೀದಿನ ಮಂಗಳೂರಿಗೆ ತೆರಳುತ್ತಿದ್ದೇನೆ. ನನ್ನ ಬೆಳವಣಿಗೆಯಲ್ಲಿ ಸತೀಶ್‌ ಕುಮಾರ್‌ ಕುದ್ರೋಳಿ ಅವರ ಸಹಕಾರವಿದೆ. 2017ರಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದು, ಕೆಎಎಸ್‌ ಪರೀಕ್ಷೆ ಬರೆಯಲೂ ತಯಾರಿ ನಡೆಸುತ್ತಿದ್ದೇನೆ ಎನ್ನುತ್ತಾರೆ ಸ್ವಾತಿ.

ರಾಷ್ಟ್ರೀಯ ಪಂದ್ಯದಲ್ಲಿ ಕಂಚಿನ ಪದಕ ಗಳಿಸಿದ ಸ್ವಾತಿ ಮುಂದೆ ದುಬೈಯಲ್ಲಿ ನಡೆಯಲಿರುವ ಏಷ್ಯಾನ್‌ ಪವರ್‌ ಲಿಫ್ಟಿಂಗ್‌ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ. ಸಪ್ಟೆಂಬರ್‌ ತಿಂಗಳಲ್ಲಿ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ.

Advertisement

ಬಡತನದ ಹಾದಿ…
ಸ್ವಾತಿ ಬಡತನದ ಕುಟುಂಬದಿಂದ ಬೆಳೆದು ಬಂದವರು. ಅವರ ತಾಯಿ ಬಟ್ಟೆಯ ಅಂಗಡಿ ನಡೆಸು ತ್ತಿದ್ದಾರೆ. ಹೀಗಾಗಿ ಸಂಸಾರ ನಡೆಸಲು ಹಾಗೂ ಇತರ ಖರ್ಚುವೆಚ್ಚಗಳಿಗೆ ತಾಯಿಯೇ ಆಸರೆ. ಬಾಡಿಗೆ ಮನೆಯಲ್ಲಿಯೇ ನೆಲೆಸಿದ್ದಾರೆ. ರಾಷ್ಟ್ರಮಟ್ಟದ ಸಾಧನೆ ಹಿಂದೆ ತಾಯಿಯ ಪಾತ್ರ ಪ್ರಮುಖವಾಗಿದೆ. ಪವರ್‌ ಲಿಫ್ಟಿಂಗ್‌ಗೆ ಹೆಣ್ಣು ಮಕ್ಕಳನ್ನು ಕಳಿಸುವುದು ಕಡಿಮೆ. ಆದರೆ ಅಮ್ಮ ಮಾತ್ರ ನನಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿ ಕಳುಹಿಸಿದ್ದಾರೆ. ಪವರ್‌ ಲಿಫ್ಟರ್‌ ಆಗಬೇಕಾದರೆ ಹೆಚ್ಚು ಖರ್ಚುವೆಚ್ಚದ ಆವಶ್ಯಕತೆಯೂ ಇದೆ. ಇದೆಲ್ಲವೂ ತನ್ನ ತಾಯಿಯಿಂದಲೇ ದೊರೆಯ ಬೇಕಾಗಿದೆ. ಎಲ್ಲವನ್ನೂ ಅವರು ನೀಡಿದ್ದಾರೆ. 

– ಜೀವೇಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next