Advertisement
ಒಂದೆಡೆ ಮಳೆ ಕೊರತೆಯಿಂದಾಗಿ ಬಿತ್ತಿದ ಬೆಳೆಗಳು ಒಣಗುತ್ತಿದ್ದರೆ, ಮಳೆಗಾಲದಲ್ಲೇ ಬೇಸಗೆ ವಾತಾವರಣ ಅನುಭವಕ್ಕೆ ಬರುತ್ತಿದೆ. ಜಲಾಶಯಗಳ ನೀರಿನ ಸಂಗ್ರಹ ಹಾಗೂ ಒಳಹರಿವು ತಗ್ಗಿದೆ. ಹೀಗಾಗಿ ಪ್ರಮುಖ ಜಲವಿದ್ಯುತ್ ಸ್ಥಾವರಗಳು ಹಾಗೂ ಕಿರು ಜಲ ವಿದ್ಯುತ್ ಸ್ಥಾವರಗಳಿಗೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಸರ್ವಲಕ್ಷಣಗಳೂ ಗೋಚರಿಸುತ್ತಿವೆ. ಈಗಲೇ ರಾಜ್ಯ ಅನಿಯಮಿತ ಲೋಡ್ ಶೆಡ್ಡಿಂಗ್ ಎದುರಿಸುತ್ತಿದೆ.
Related Articles
ಪ್ರಸಕ್ತ ತಿಂಗಳಿನಲ್ಲಿ 3,162.74 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಆದರೆ ಆ. 1ರಿಂದ ಈವರೆಗೆ ಶಾಖೋತ್ಪನ್ನ ಕೇಂದ್ರಗಳಿಂದ 922.974 ದಶಲಕ್ಷ ಯುನಿಟ್ (ಸರಾಸರಿ ಶೇ. 40.129) ವಿದ್ಯುತ್ ಉತ್ಪಾದಿಸಲಾಗಿದೆ. ಮೂರು ಪ್ರಮುಖ ಜಲ ವಿದ್ಯುತ್ ಸ್ಥಾವರಗಳಿಂದ 708.241 ಮಿಲಿಯ ಯುನಿಟ್ (ಶೇ. 30.793), ಕಿರು ಜಲವಿದ್ಯುತ್ ಸ್ಥಾವರಗಳಿಂದ 288.388 ಮಿ.ಯು. (ಶೇ.12.539), ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳಿಂದ 3.1449 ಮಿ.ಯು. (ಶೇ. 013) ರಷ್ಟು ಸೇರಿ ಒಟ್ಟು 1,922.748 ದಶಲಕ್ಷ ಯುನಿಟ್ (ಶೇ. 83.598) ವಿದ್ಯುತ್ ಉತ್ಪಾದಿಸಿದೆ. ಅಂದರೆ 1,239.994 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಪರಿಣಾಮವಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.
Advertisement
ಸರಾಸರಿ 292.71 ದಶಲಕ್ಷ ಯುನಿಟ್ ಬಳಕೆಗುರುವಾರದ ಅಂತ್ಯಕ್ಕೆ ರಾಜ್ಯದ ವಿದ್ಯುತ್ ಬೇಡಿಕೆಯು 10,319 ಮೆ.ವ್ಯಾ. ಇದೆ. ಉತ್ಪಾದನೆ 5120 ಮೆ.ವ್ಯಾ. ಇತ್ತು. ನ್ಯಾಶನಲ್ ಸೆಂಟರ್ಸ್ ಫಾರ್ ಎನ್ವಿರಾನ್‌ಮೆಂಟಲ್ ಪ್ರಡಿಕ್ಷನ್ (ಎನ್‌ಸಿಇಪಿ) ಮೂಲಗಳಿಂದ 2,046 ಮೆ.ವ್ಯಾ. ಹಾಗೂ ಕೇಂದ್ರೀಯ ಉತ್ಪಾದನೆಯ ಪಾಲು 3,145 ಮೆ.ವ್ಯಾ. ಇತ್ತು. ಗರಿಷ್ಟ ವಿದ್ಯುತ್ ಹೊರೆಯು 16,272 ಮೆ.ವ್ಯಾ. ಇದ್ದರೆ, ಕನಿಷ್ಠ ಹೊರೆಯು 9,669 ಮೆ.ವ್ಯಾ. ಇತ್ತು. ದಿನದ ಸರಾಸರಿ ವಿದ್ಯುತ್ ಬಳಕೆ ಪ್ರಮಾಣವು 292.71 ದಶಲಕ್ಷ ಯುನಿಟ್‌ಗಳಷ್ಟಿತ್ತು. ಅಂದರೆ ವಿದ್ಯುತ್ ಉತ್ಪಾದನೆ ಹಾಗೂ ಬೇಡಿಕೆಯ ನಡುವೆ ಸರಾಸರಿ 2,980 ಮೆ.ವ್ಯಾ. ಅಂತರವಿದ್ದು, ಜಿಂದಾಲ್, ಯುಪಿಸಿಎಲ್ ಸಹಿತ ವಿವಿಧ ಮೂಲಗಳಿಂದ 140.90 ದಶಲಕ್ಷ ಯುನಿಟ್ ವಿದ್ಯುತ್‌ನ್ನು ಈವರೆಗೆ ಖರೀದಿಸಲಾಗಿದೆ. 20.37 ದಶಲಕ್ಷ ಯುನಿಟ್ ಖರೀದಿ
ಜಿಂದಾಲ್‌ನಿಂದ ಹೊರಗಡೆಗೆ 7.39 ದಶಲಕ್ಷ ಯುನಿಟ್ ಹಾಗೂ ಉಡುಪಿ ಪವರ್ ಕಾರ್ಪೊರೇಷನ್ ಲಿ. (ಯುಪಿಸಿಎಲ್)ನ 0.05 ಯುನಿಟ್ ವಿದ್ಯುತ್ತನ್ನು ಮಾರಾಟ ಮಾಡಿದ್ದರೆ, ಡಿವಿಸಿ ಮೂಲಕ 7.16 ದಶಲಕ್ಷ ಯುನಿಟ್ ಹಾಗೂ ಯುಪಿಸಿಎಲ್‌ನಿಂದ ಎಸ್ಕಾಂಗಳಿಗೆ 13.21 ದಶಲಕ್ಷ ಯುನಿಟ್ ವಿದ್ಯುತ್ತನ್ನು ಖರೀದಿಸಲಾಗಿದೆ. ಜಲ, ಪವನ ಶಕ್ತಿಗೆ ಸಂಪನ್ಮೂಲದ ಕೊರತೆ
ಜಲ ವಿದ್ಯುತ್ ಉತ್ಪಾದಿಸಲು ಮಳೆ ಸಂಪನ್ಮೂಲವಾದರೆ, ಪವನ ಶಕ್ತಿ ಉತ್ಪಾದನೆಗೆ ಗಾಳಿಯೇ ಸಂಪನ್ಮೂಲ. ಎರಡರ ಲಭ್ಯತೆಯೂ ಕಡಿಮೆಯಾಗಿದ್ದು, ಜಲವಿದ್ಯುತ್ ಹಾಗೂ ಪವನ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ. ಜಲಾಶಯಗಳಲ್ಲಿ ಅರ್ಧಕ್ಕಿಂತ ಕಡಿಮೆ ನೀರಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲ ವಿದ್ಯುತ್ ಉತ್ಪಾದನೆ ಪ್ರಮಾಣವನ್ನು ತಗ್ಗಿಸಿರುವ ಘಟಕಗಳು, ಶಾಖೋತ್ಪನ್ನ ಹಾಗೂ ಸೌರ ವಿದ್ಯುತ್ ಉತ್ಪಾದನೆ ಮೇಲೆ ಅವಲಂಬನೆ ಹೆಚ್ಚಾಗಿದೆ. ರಾಜ್ಯದಲ್ಲಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಆಗಲಾರದು. ಸೌರವಿದ್ಯುತ್ ಉತ್ಪಾದನೆ ಪ್ರಮಾಣ ಎಂದಿನಂತೆ ಇದೆ. ನಿರೀಕ್ಷಿತ ಮಳೆ ಇಲ್ಲದೆ ಇರುವುದರಿಂದ ಜಲವಿದ್ಯುತ್ ಉತ್ಪಾದನೆ ಹಾಗೂ ಗಾಳಿಯ ಪ್ರಮಾಣವೂ ತಗ್ಗಿರುವುದರಿಂದ ಪವನ ವಿದ್ಯುತ್ ಉತ್ಪಾದನೆ ಕಡಿಮೆ ಆಗಲಿದೆ. ವಿದ್ಯುತ್ ಬೇಡಿಕೆ ಸಹಜವಾಗಿ ಹೆಚ್ಚಾಗಿದೆ. ಅಗತ್ಯಕ್ಕೆ ತಕ್ಕಂತೆ ಗ್ರಿಡ್‌ನಿಂದ ವಿದ್ಯುತ್ ಖರೀದಿಸಲಾಗುತ್ತದೆ. -ಗೌರವ್ ಗುಪ್ತ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ 292.71 ದಶಲಕ್ಷ ಯುನಿಟ್ ವಿದ್ಯುತ್- ದಿನದ ಸರಾಸರಿ ಬಳಕೆ
7,339 ಮೆ.ವ್ಯಾ- ಸರಾಸರಿ ಉತ್ಪಾದನೆ
10,319 ಮೆ.ವ್ಯಾ- ಸರಾಸರಿ ಬೇಡಿಕೆ
2,980 ಮೆ.ವ್ಯಾ- ಸರಾಸರಿ ಅಂತರ
4.43 ದಶಲಕ್ಷ ಟನ್ – ದೇಶಾದ್ಯಂತ ಕಲ್ಲಿದ್ದಲು ಕೊರತೆ