ಬೆಂಗಳೂರು: ನವೆಂಬರ್‌ನಿಂದೀಚೆಗೆ ಎರಡು ಬಾರಿ ವಿದ್ಯುತ್ ದರ ಹೆಚ್ಚಳದಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಎಸ್ಕಾಂಗಳು ದರ ಏರಿಕೆಗೆ ಪ್ರಸ್ತಾವ ಸಂಬಂಧ ಆಕ್ಷೇಪಣೆಗಳನ್ನು ಆಹ್ವಾನಿಸುತ್ತಿದ್ದು, ಏಪ್ರಿಲ್‌ನಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗುವ ಆತಂಕ ಮೂಡಿದೆ.
ಕೋವಿಡ್ ತಂದೊಡ್ಡಿರುವ ಸಂಕಷ್ಟದ ನಡುವೆಯೂ ನ.1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 40 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿತ್ತು. ಬಳಿಕ ಪ್ರಸಕ್ತ ಸಾಲಿನ ಎರಡನೇ ತ್ತೈಮಾಸಿಕದಲ್ಲಿ ಉಂಟಾದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಹೆಚ್ಚಳ ಹೊರೆಯನ್ನು ಸರಿದೂಗಿಸಲು ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ದರವನ್ನು 4 ಪೈಸೆಯಿಂದ 8 ಪೈಸೆವರೆಗೆ ಹೆಚ್ಚಳ ಮಾಡಿ ಜ.1ರಿಂದ ಮಾ.31ರವೆಗೆ ಮಾತ್ರ ಸಂಗ್ರಹಿಸಲು ಅವಕಾಶ ನೀಡಿ ಕೆಇಆರ್‌ಸಿ ಡಿಸೆಂಬರ್‌ನಲ್ಲಿ ಆದೇಶಿಸಿದೆ.
ಏ. 1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ದರ ಹೆಚ್ಚಳಕ್ಕೆ ಐದೂ ಎಸ್ಕಾಂಗಳು ಈಗಾಗಲೇ ಪ್ರಸ್ತಾವ ಸಲ್ಲಿಸಿವೆ. ಬೆಸ್ಕಾಂ ಪ್ರತಿ ಯೂನಿಟ್ ದರ 1.39 ರೂ., ಮೆಸ್ಕಾಂ 1.67 ರೂ. ಸೇರಿದಂತೆ ಎಲ್ಲ ಎಸ್ಕಾಂಗಳು 1 ರೂ.ಗಿಂತಲೂ ಹೆಚ್ಚು ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿವೆ. ಕೆಲ ಎಸ್ಕಾಂಗಳು ಈಗಾಗಲೇ ದರ ಪರಿಷ್ಕರಣೆ ಪ್ರಸ್ತಾವಕೆಕ ಗ್ರಾಹಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಇನ್ನೂ ಕೆಲ ಎಸ್ಕಾಂಗಳು ಇನ್ನಷ್ಟೇ ಆಕ್ಷೇಪಣೆಗಳನ್ನು ಆಹ್ವಾನಿಸಬೇಕಿದೆ. ಗ್ರಾಹಕರಿಂದ ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೆಇಆರ್‌ಸಿ ವಿಚಾರಣೆ ಆರಂಭಿಸಿ ದರ ಪರಿಷ್ಕರಣೆ ಬಗ್ಗೆ ಅಂತಿಮ ಆದೇಶ ಹೊರಡಿಸಲಿದೆ ಎಂದು ಮೂಲಗಳು ಹೇಳಿವೆ.
ಪ್ರಸಕ್ತ ಸಾಲಿನ ಎರಡನೇ ತ್ತೈಮಾಸಿಕದಲ್ಲಿ ಅಂದರೆ ಜುಲೈ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ವಿದ್ಯುತ್ ಖರೀದಿ ವೆಚ್ಚ ಹೆಚ್ಚಳ ಹಾಗೂ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಹೆಚ್ಚಳದ ಹಿನ್ನೆಲೆಯಲ್ಲಿ ಆರ್ಥಿಕ ಹೊರೆಯಾಗಿತ್ತು. ಅದನ್ನು ಸರಿದೂಗಿಸಲು ಕೊನೆಯ ತ್ತೈಮಾಸಿಕದಲ್ಲಿ ಹೆಚ್ಚುವರಿ ದರ ಸಂಗ್ರಹಕ್ಕೆ ಅವಕಾಶ ನೀಡುವಂತೆ ಎಲ್ಲ ಎಸ್ಕಾಂಗಳು ಮನವಿ ಸಲ್ಲಿಸಿದ್ದವು. ಅದರಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ದರ 8 ಪೈಸೆ, ಮೆಸ್ಕಾಂ, ಸೆಸ್ಕ್ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ 5 ಪೈಸೆ ಹಾಗೂ ಹೆಸ್ಕಾಂ ವ್ಯಾಪ್ತಿಯಲ್ಲಿ 4 ಪೈಸೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿ ಕೆಇಆರ್‌ಸಿ ಆದೇಶ ಹೊರಡಿಸಿದೆ. ಜ.1ರಿಂದ ಮಾ.31ರವರೆಗೆ ಮಾತ್ರ ಈ ಪರಿಷ್ಕೃತ ದರ ಸಂಗ್ರಹಕ್ಕೆ ಅವಕಾಶ ಕಲ್ಪಿಸಿದೆ.