ಕಿಕ್ಕೇರಿ: ಹೋಬಳಿಯ ರಾಮನಹಳ್ಳಿ ರಸ್ತೆ ತುಂಬಾ ಗುಂಡಿಗಳು ಬಿದ್ದು ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.
ಈ ರಸ್ತೆ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಸೇರಿಸುವ ಅತಿ ಹತ್ತಿರದ ರಸ್ತೆ ಕೂಡ ಆಗಿದೆ. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗು ಎನ್ನುವ ರೀತಿ ಸುತ್ತಿ ಬಳಸಿ ಬಾರದೆ ಸಕ್ಕರೆ ಕಾರ್ಖಾನೆ, ಐಯ್ಯನ ಕೊಪ್ಪಲು, ದೊರೇನಹಳ್ಳಿ, ರಾಮನಹಳ್ಳಿ, ಚೌಡೇನಹಳ್ಳಿ, ಬೀಚೇನ ಹಳ್ಳಿ, ಮಾಣಿಕನಹಳ್ಳಿ, ಕಾರಿಗಾನಹಳ್ಳಿ, ಮಾಕವಳ್ಳಿ ಮತ್ತಿತರ ಗ್ರಾಮಗಳಿಗೆ ಸಾಗಲು ಅತಿ ಸನಿಹದ ರಸ್ತೆ ಇದಾಗಿದೆ.
ನಿತ್ಯವೂ ಸಂಕಷ್ಟ: ಕಿಕ್ಕೇರಿಯಿಂದ ಚೌಡೇನಹಳ್ಳಿ ಕೂಡು ರಸ್ತೆವರೆಗೆ ಅರೆಬರೆ ಡಾಂಬರು ರಸ್ತೆ ಇದೆ. ನಂತರ ಮಣ್ಣಿನ ರಸ್ತೆ ಇದ್ದು ರಸ್ತೆ ತುಂಬ ಗುಂಡಿ, ಕಲ್ಲು ಗಳು ಕಿತ್ತು ಮೇಲೆ ಬಂದಿವೆ. ರೈತಾಪಿ ಜನತೆ ರಸ್ತೆಯಲ್ಲಿ ನಿತ್ಯವೂ ಓಡಾಡಲು ಪರಿತಪಿಸಬೇಕಿದೆ.
ಎತ್ತಿನಗಾಡಿಯ ಮೂಲಕ ಗೊಬ್ಬರ, ನೇಗಿಲು ಮತ್ತಿತರ ವಸ್ತುಗಳನ್ನು ಸಾಗಿಸಲು ರೈತರು ಪರದಾಡುವಂತಾಗಿದೆ. ರಾಮನಹಳ್ಳಿ ಗ್ರಾಮದ ಜನತೆ ನಿತ್ಯವೂ ಹೋಬಳಿ ಕೇಂದ್ರಕ್ಕೆ ಓಡಾಡಬೇಕಿರುವುದು ಅನಿವಾರ್ಯತೆ ಇದ್ದು ಜಲ್ಲಿ ರಸ್ತೆ ಮೇಲೆ ಓಡಾಡಲು ಕಷ್ಟಕರವಾಗಿದೆ. ಶಾಲಾ ಕಾಲೇಜು ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ತೀವ್ರಕರವಾದ ಹಿಂಸೆಯಾಗಿದೆ.
ಬೈಕ್‌ಗಳನ್ನು ನಿತ್ಯವೂ ರಿಪೇರಿ ಮಾಡಿಸಿಕೊಳ್ಳಬೇಕಿದೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಓಡಾಡುವುದು, ವಾಹನ ಕೆಟ್ಟು ನೂಕಿಕೊಂಡು ಮನೆಗೆ ಸೇರುವುದು ಯಾತನೆಯಾಗಿದೆ.
ಅಧಿಕಾರಿಗಳು ಕ್ರಮ ಕೈಗೊಳ್ಳಲಿ : ಈ ರಸ್ತೆಯ ಬಳಿ ಇರುವ ರೈತರು ಆಗಿಂದಾಗ್ಗೆ ತಮ್ಮ ಓಡಾಟಕ್ಕೆ ವಿಧಿ ಇಲ್ಲದೆ ಗುಂಡಿಗಳಿಗೆ ಕಲ್ಲು ಮಣ್ಣು ತುಂಬುವುದು ಮಾಮೂಲಿ. ಸಂಬಂಧಪಟ್ಟ ಇಲಾಖೆ ತುರ್ತು ಕ್ರಮವಹಿಸಿ ರಸ್ತೆ ಗುಂಡಿ ಮುಚ್ಚಿ ಡಾಂಬರೀಕರಣ ಮಾಡಲು ಮುಂದಾಗಬೇಕಿದೆ ಎಂದು ಡೇರಿ ಕುಮಾರ್ ಆಗ್ರಹಿಸಿದ್ದಾರೆ.