ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.22ರಂದು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನೌಕರರ ಸಂಘ ಕೈಬಿಟ್ಟಿದೆ. ಅಲ್ಲದೇ ಮುಷ್ಕರವನ್ನು ತಿಂಗಳದ ಮಟ್ಟಿಗೆ ಮುಂದೂಡಲಾಗಿದೆ ಎಂದು ಹೈಕೋರ್ಟ್‌ಗೆ ಹೇಳಿಕೆ ನೀಡಿದೆ.
ಹೈಕೋರ್ಟ್‌ನ ಸಕಾಲಿಕ ಮಧ್ಯ ಪ್ರವೇಶದಿಂದ ಮೆಟ್ರೋ ನೌಕರರು ಹಾಗೂ ಬಿಎಂಆರ್‌ಸಿಎಲ್ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಂತಾಗಿದೆ. ನೌಕರರ ವಿರುದ್ಧ ಎಸ್ಮಾ ಕಾಯ್ದೆ ಜಾರಿಗೊಳಿಸದಂತೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲು ಕೋರಿ ಮೆಟ್ರೋ ರೈಲು ನಿಗಮ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಶ್ರೀನಿವಾಸಗೌಡ ಅವರಿದ್ದ ಏಕಸದಸ್ಯ ಪೀಠದ ಸಲಹೆಯಂತೆ ಬಿಎಂಆರ್‌ಸಿಎಲ್ ಮತ್ತು ನೌಕರರು ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಮುಂದಾಗಿದೆ. ಒಂದು ತಿಂಗಳ ಮಟ್ಟಿಗೆ ಮುಷ್ಕರ ಮುಂದೂಡಲು ನೌಕರರ ಸಂಘ ಒಪ್ಪಿಗೆ ಸೂಚಿಸಿತು.
26ರಿಂದ ಸಭೆ
ವಾರಕ್ಕೆ ಮೂರು ಸಭೆಗಳಂತೆ ಮಾ.26ರಿಂದ ನಿಗಮ ಹಾಗೂ ನೌಕರರು ಸಭೆ ನಡೆಸಿ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಬಿಎಂಆರ್‌ಸಿಎಲ್ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ್ ಟಿ.ಆರ್, ಉಪಾಧ್ಯಕ್ಷ ಎಸ್. ಮಂಜುನಾಥ್, ಜಂಟಿ ಕಾರ್ಯದರ್ಶಿ ರಾಕೇಶ್ ಜೋಸೆಫ್, ಕಾರ್ಯನಿರ್ವಾಹಕ ಸದಸ್ಯ ಎಸ್.ಸಾಗರ್ ನೌಕರರ ಪರವಾಗಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಿಗಮದ ಪರವಾಗಿ ಬಿಎಂಆರ್‌ಸಿಎಲ್ ಕಾನೂನು ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ಎಸ್.ಬಾಲಕೃಷ್ಣ, ಕೈಗಾರಿಕಾ ಸಂಪರ್ಕ ಅಧಿಕಾರಿ ಗುರುದಾಸ್ ಭಟ್ ಹಾಗೂ ಹಣಕಾಸು ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ದೀಪಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಎರಡೂ ಕಡೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು ವಾದ ಮಂಡಿಸಿ, ರಾಜ್ಯ ಸರ್ಕಾರ ಮೆಟ್ರೋ ನೌಕರರನ್ನು ಎಸ್ಮಾ ವ್ಯಾಪ್ತಿಗೆ ತಂದಿದೆ. ನಿಗಮದ ನೌಕರರು ಇದೇ 22ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಮೆಟ್ರೊ ನೌಕರರ ವಿರುದ್ಧ ಎಸ್ಮಾ ಜಾರಿಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಅಗತ್ಯವಾದರೆ ಮಾರ್ಗದರ್ಶನ: ಸರ್ಕಾರ ಮೊದಲು ಬಿಎಂಆರ್‌ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ ನೀಡಬೇಕು. ನೌಕರರ ಬೇಡಿಕೆಗಳ ಈಡೇರಿಸುವಂತೆ ಸಲ್ಲಿಸಿರುವ ಮನವಿ ಆಲಿಸಲು ನಿಗಮವು ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದು, ತಡೆಯಾಜ್ಞೆ ತೆರವುಗೊಳಿಸಬಾರದು ಎಂದು ನೌಕರರ ಸಂಘದ ಪರ ವಕೀಲರು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಅಗತ್ಯವಿದ್ದರೆ ನ್ಯಾಯಾಲಯವೇ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಅಣಕು ಪ್ರದರ್ಶನ: ಈ ಮಧ್ಯೆ ಮುಷ್ಕರಕ್ಕೆ ಬಿಎಂಆರ್‌ಸಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಪ್ರತಿ ಡಿಪೋಗಳಿಗೆ ತಲಾ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. 80 ತಾತ್ಕಾಲಿಕ ಚಾಲಕರನ್ನು ಸಜ್ಜುಗೊಳಿಸಲಾಗಿತ್ತು. ಇವರೆಲ್ಲರೂ ಬುಧವಾರ ಅಣಕು ಪ್ರದರ್ಶನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.