Advertisement

ಬಿಜೆಪಿ ಸರಕಾರದಿಂದ ಕಾಸಿಗಾಗಿ ಪೋಸ್ಟಿಂಗ್: ಕುಮಾರಸ್ವಾಮಿ ಆರೋಪ

04:13 PM Oct 28, 2022 | Team Udayavani |

ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಗೂ ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಉತ್ತರ ಭಾರತದ ಅಧಿಕಾರಿಗಳ ದರ್ಪದಿಂದ ಹಾಗೂ ಸರ್ಕಾರದಿಂದಲೇ ಆಗಿರುವ ಕಗ್ಗೊಲೆಯೇ ಹೊರತು ಬರೀ ಹೃದಯಾಘಾತ ಅಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.

ಈ ಸಾವಿಗೆ ಬಿಜೆಪಿ ಹೈಕಮಂಡ್ ಕೃಪಾಕಟಾಕ್ಷ ಇರುವ, ಅದರಲ್ಲೂ ಉತ್ತರ ಭಾರತ ಮೂಲದ ಹಿರಿಯ ಅಧಿಕಾರಿಗಳ ಉದ್ದತಟನ, ಕಿರುಕುಳ, ಸರ್ಕಾರದ ನಡವಳಿಕೆ, ಕಾಸಿಗಾಗಿ ಹುದ್ದೆ ಕೊಡುತ್ತಿರುವುದೇ ಕಾರಣ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಕೆ.ಆರ್.ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ಇವರ ವ್ಯಾಪ್ತಿಯಲ್ಲಿ ಇತ್ತು. ಬೆಳಗಿನ ಜಾವದವರೆಗೆ ಅದು ತೆಗೆದಿತ್ತು, ಇದಕ್ಕೆ ಈ ಪೊಲೀಸ್ ಸಹಕಾರವಿತ್ತೆಂದು ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರಂತೆ. ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ತೆರೆಯುವ ಅವಕಾಶ ಕೊಟ್ಟಿದೆ. ಆ ಪಬ್ ಎಷ್ಟೊತ್ತು ತೆಗೆದಿತ್ತು, ಅಲ್ಲಿ ಯಾರಿದ್ದರು? ರಾಜಕಾರಣಿ ಬೆಂಬಲಿಗರು ಎಷ್ಟು ಜನ ಅಲ್ಲಿ ಇದ್ದರು?  ಪೊಲೀಸ್ ಅಧಿಕಾರಿಗಳು ಕೂಡ ಡಾನ್ಸ್ ಮಾಡಿದ್ದಾರೆಂದು ರಿಪೋರ್ಟ್ ಇದೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅನಧಿಕೃತವಾಗಿ ಕ್ಯಾಸಿನೋ, ಮಟ್ಕಾ ದಂಧೆ ಕೂಡ ನಡೆಯುತ್ತಿದೆ. ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.

Advertisement

ಇದನ್ನೂ ಓದಿ:ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ: 1.50 ಕೋಟಿ ಜನರು ಭಾಗಿ

ಈ ಸರಕಾರ ನೇಮಕಾತಿ, ವರ್ಗಾವಣೆಗೆ ಲಕ್ಷಾಂತರ ಹಣ ಪಡೆದು ಕೊಳ್ಳೆ ಹೊಡೆಯುತ್ತಿದೆ. ಅದೇ ರೀತಿ ಒತ್ತಡ ತಂದು ನಂದೀಶ್ ಅವರಿಂದ ಹಣ ವಸೂಲಿ ಮಾಡಲಾಗಿದೆ. ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಬಿಜೆಪಿ ಹೈಕಮಾಂಡ್ ರಕ್ಷಣೆ ಇದೆಯೆಂದು ಹಿರಿಯ ಅಧಿಕಾರಿಗಳು ಹೀಗೆ ಮಾಡುತ್ತಿದ್ದಾರೆಂದ ಎಚ್ಡಿಕೆ ಅವರು, ಹಲವಾರು ಪ್ರಕರಣಗಳಲ್ಲಿ ಐಎಎಸ್ ಸೇರಿ ಕೆಲ ಅಧಿಕಾರಿಗಳ ಮನೆಗಳಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ. ನಂತರ ನೋಡಿದರೆ ಅಂತಹ ಅಧಿಕಾರಿಗಳು ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಇವರೇ ದಾಳಿ ಮಾಡ್ತಾರೆ. ಅಂತಹ ವ್ಯಕ್ತಿಗಳಿಗೆ ಒಳ್ಳೊಳ್ಳೆ ಪೋಸ್ಟಿಂಗ್ ಕೊಡ್ತಾರೆ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವೇಚ್ಚಾಚಾರವಾಗಿ ದಂಧೆ ನಡೆಸಲು ಯಾಕೆ ಬಿಡಬೇಕು? ರಾಮನಗರ ಜಿಲ್ಲೆಯಲ್ಲಿ ಏನಾಗುತ್ತಿದೆ ಎನ್ನುವುದು ಕೂಡ ನನಗೆ ಗೊತ್ತಿದೆ. ಎಲ್ಲಿ, ಹೇಗೆ ಪೋಸ್ಟಿಂಗ್ ಕೊಡ್ತಾ ಇದ್ದಾರೆ ಅಂತಲೂ ಗೊತ್ತಿದೆ. ನಾನು ಹಣ ಪಡೆದು ಪೋಸ್ಟಿಂಗ್ ಕೊಟ್ಟಿದ್ದರೆ ತಲೆ ಬಾಗುತ್ತೇನೆ ಎಂದು ಅವರು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕೇರಳ ಜೆಡಿಎಸ್ ಅಧ್ಯಕ್ಷ ಟಿ. ಥಾಮಸ್ ಮ್ಯಾಥ್ಯೂ, ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next