Advertisement

ಅಂತಾರಾಜ್ಯ ಸಂಚಾರ ಆರಂಭದ ಸಾಧ್ಯತೆ

02:08 AM May 01, 2020 | Sriram |

ಉಡುಪಿ: ಅಂತಾರಾಜ್ಯ ಸಂಚಾರ ಆರಂಭವಾಗುವ ಲಕ್ಷಣಗಳಿದ್ದು ಅದನ್ನು ಹೇಗೆ ನಿರ್ವಹಿಸಬಹುದು ಎಂದು ಜಿಲ್ಲಾಡಳಿತ ಚಿಂತನ ಮಂಥನ ನಡೆಸಿದೆ.

Advertisement

ಜಿಲ್ಲೆಯಲ್ಲಿರುವ ಹೊರ ರಾಜ್ಯದ ಕಾರ್ಮಿಕರ ವಿವರಗಳನ್ನು ಸಂಗ್ರಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹೊರರಾಜ್ಯದವರು ಉಡುಪಿ ಜಿಲ್ಲೆಗೆ ಆಗಮಿಸಬೇಕಾದರೆ ಅವರು ಆ ರಾಜ್ಯ ಸರಕಾರದ ನಿರ್ದೇಶನ ಅನುಸಾರ ಬರಬೇಕಾಗುತ್ತದೆ. ಇಂತಹವರು ಬಂದಾಗ ಅವರನ್ನು ಹೇಗೆ ಪರೀಕ್ಷಿಸಬಹುದು? ಚೆಕ್‌ಪೋಸ್ಟ್‌ ಕ್ರಮ ಹೇಗೆ? ಕ್ವಾರಂಟೈನ್‌ ಮಾಡುವುದಾದರೆ ಎಲ್ಲಿ ಮಾಡಬಹುದು ಎಂಬಿತ್ಯಾದಿ ಪ್ರಾಥಮಿಕ ಚರ್ಚೆಗಳು ನಡೆದಿವೆ.

ರಾಜ್ಯ ಮಟ್ಟದಲ್ಲಿ ರಾಜ್ಯಕ್ಕೆ ಬರುವವರು ಮತ್ತು ಹೋಗುವವರ ನಿರ್ವಹಣೆಗಾಗಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಹೊರ ದೇಶದವರ ಆಗಮನಕ್ಕೆ ಕೇಂದ್ರ ಸರಕಾರ ಮಾರ್ಗದರ್ಶಿ ಸೂತ್ರಗಳನ್ನು ಕೊಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಶುಕ್ರವಾರ ಬ್ರಹ್ಮಾವರ, ಉಡುಪಿ, ಕಾರ್ಕಳ, ಕುಂದಾಪುರ, ಕಾಪುವಿನಿಂದ ತಲಾ ಐದು ಬಸ್‌ಗಳಲ್ಲಿ ಹೊರ ಜಿಲ್ಲೆಗಳಿಗೆ ತೆರಳಬೇಕಾದ ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ಜಿಲ್ಲಾಡಳಿತವೇ ಈ ಖರ್ಚನ್ನು ಭರಿಸಿದರೆ, ಮುಂದೆ ಪ್ರಯಾಣಿಕರಿಂದಲೇ ಭರಿಸುವಂತೆ ರಾಜ್ಯ ಸರಕಾರ ನಿರ್ದೇಶನ ನೀಡಿದೆ. ಬಸ್‌ನ ಸಾಮರ್ಥ್ಯದ ಶೇ. 40ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲು ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next