Advertisement
ಹನೂರು ಪಪಂನಲ್ಲಿ 13 ವಾರ್ಡ್‌ಗಳಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು 7 ಸ್ಥಾನಗಳ ಅವಶ್ಯವಿದೆ. ಆದರೆ, ಕಳೆದ 2019ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್-4, ಜೆಡಿಎಸ್-6 ಮತ್ತು ಬಿಜೆಪಿ-3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಈ ಹಿನ್ನೆಲೆ ಅತಂತ್ರ ಪಂಚಾಯ್ತಿ ನಿರ್ಮಾಣವಾಗಿತ್ತು. ಇದೀಗ ಸರ್ಕಾರ ಮೀಸಲಾತಿ ನಿಗದಿಪಡಿಸಿದ್ದು, ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
Related Articles
Advertisement
ಇದೀಗ ಉಂಟಾಗಿರುವ ಅತಂತ್ರ ಪರಿಸ್ಥಿತಿಯ ಲಾಭ ಪಡೆದು, ಯಾವ ಪಕ್ಷ ತಮ್ಮೊಂದಿಗೆ ಕೈ ಜೋಡಿಸಿ ಮೊದಲ ಅವಧಿಗೆ ನಮಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತದೆಯೋ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಲೆಕ್ಕಾಚಾರವಾಗಿತ್ತು. ಬದಲಾದ ಮೀಸಲಾತಿ ಅನ್ವಯ ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆದರೆ, ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ಎಲ್ಲರೂ ಪುರುಷ ಸದಸ್ಯರೇ ಆಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದೊರಕದಂತಾಗಿದೆ.
ಜೆಡಿಎಸ್ ಜೊತೆ ಮೈತ್ರಿಗೆ ಒಲವಿಲ್ಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಫರ್ಧಿಸಿ ಹಾಲಿ ಮತ್ತು ಮಾಜಿ ಶಾಸಕರು ಇಬ್ಬರಿಗೂ ನಿದ್ದೆಗೆಡಿಸಿದ್ದ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ಹಾಲಿ ಶಾಸಕ ನರೇಂದ್ರ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ನಿರ್ಧಾರವಾಗಿದೆ. ಒಂದು ಹಂತದಲ್ಲಿ ಶಾಸಕ ನರೇಂದ್ರರಿಗಿಂತ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರಿಗೆ ಜೆಡಿಎಸ್ ಮೇಲೆ ಅಸಮಾಧಾನವಿದೆ ಎನ್ನಲಾಗಿದ್ದು,
ತಮ್ಮ ಪುತ್ರ ಪ್ರೀತನ್ ನಾಗಪ್ಪ ಅವರ ಸೋಲಿಗೆ ಅವರೇ ಕಾರಣ ಎಂಬ ಕೋಪವಿದೆ. ಈ ಹಿನ್ನೆಲೆ ಪರಿಮಳಾ ನಾಗಪ್ಪ ಅವರು ಜೆಡಿಎಸ್ ಜೊತೆ ಮೈತ್ರಿಗೆ ಸಿದ್ಧರಿಲ್ಲ. ಜೆಡಿಎಸ್‌ಗೆ ಅಧಿಕಾರ ನೀಡಿದಲ್ಲಿ ಮುಂದೆ ಆಗಬಹುದಾದ ಅಡೆ-ತಡೆಗಳನ್ನು ಗಮನದಲ್ಲಿಟ್ಟುಕೊಂಡು ಕುಟುಂಬ ರಾಜಕಾರಣ ಉಳಿಸಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಮೈತ್ರಿ ಸಾಧ್ಯತೆಗಳಿವೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಐವರು ಮಹಿಳಾ ಸದಸ್ಯರು ಆಯ್ಕೆ: ಹನೂರು ಪಪಂ 13 ಸ್ಥಾನಗಳಲ್ಲಿ ಹಾಲಿ 5 ಸ್ಥಾನಗಳಲ್ಲಿ ಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ. ಇದರಲ್ಲಿ ಬಿಜೆಪಿಯಿಂದ 12 ವಾರ್ಡ್ ಸದಸ್ಯೆ ಚಂದ್ರಮ್ಮ, 5ನೇ ವಾರ್ಡ್‌ನ ರೂಪ ಆಯ್ಕೆಯಾಗಿದ್ದು, ಜೆಡಿಎಸ್‌ನಿಂದ 1ನೇ ವಾರ್ಡ್‌ನ ಮುಮ್ತಾಜ್‌ಭಾನು, 4ನೇ ವಾರ್ಡ್‌ನ ಮಂಜುಳಾ, 7ನೇ ವಾರ್ಡ್‌ನ ಪವಿತ್ರಾ ಆಯ್ಕೆಯಾಗಿದ್ದಾರೆ. ರೂಪ ಮತ್ತು ಮಂಜುಳಾ ಪ.ಜಾ ಮೀಸಲು ಕ್ಷೇತ್ರದಿಂದ, ಮುಮ್ತಾಜ್ ಭಾನು ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದಿಂದ ಬಿಜೆಪಿಯ ಚಂದ್ರಮ್ಮ ಮತ್ತು ಜೆಡಿಎಸ್‌ನ ಪವಿತ್ರಾ ಆಯ್ಕೆಯಾಗಿದ್ದಾರೆ.
ಆದ್ದರಿಂದ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ ಬಿಜೆಪಿಯಿಂದ ಚಂದ್ರಮ್ಮ ಮತ್ತು ಜೆಡಿಎಸ್‌ನಿಂದ ಪವಿತ್ರಾ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಲ್ಲಿ 12ನೇ ವಾರ್ಡ್‌ನ ಸದಸ್ಯೆ ಚಂದ್ರಮ್ಮ ಅಧ್ಯಕ್ಷರಾಗಲಿದ್ದಾರೆ. ಅಥವಾ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಲ್ಲಿ ಅಧಿಕಾರ ಹಂಚಿಕೆಯಾಗುವ ಸಾಧ್ಯತೆಗಳಿವೆ. ಒಟ್ಟಾರೆ ಹನೂರು ಪಪಂ ಚುಕ್ಕಾಣಿ ಹಿಡಿಯಲು ಬದ್ಧವೈರಿಗಳಂತೆ ಕಾದಾಡುತ್ತಿದ್ದ ಎರಡೂ ಕುಟುಂಬಗಳು ಮೈತ್ರಿ ಮಾಡಿಕೊಳ್ಳಲಿದೆಯೇ ಅಥವಾ 3ನೇ ಶಕ್ತಿಯೊಂದಿಗೆ ಕೈ ಜೊಡಿಸಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿನಾಂಕ ನಿಗದಿಯಾದ ಬಳಿಕ ಪಕ್ಷದ 4 ಸದಸ್ಯರು, ಮುಖಂಡರು, ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.-ಆರ್. ನರೇಂದ್ರ, ಶಾಸಕರು, ಹನೂರು ಕ್ಷೇತ್ರ ನಾವು ಯಾವ ಪಕ್ಷದೊಂದಿಗೂ ಮೈತ್ರಿಗೆ ಸಿದ್ಧವಿಲ್ಲ. ಆದ್ದದರಿಂದ ನಾವು ವಿರೋಧ ಪಕ್ಷದಲ್ಲಿಯೇ ಕುಳಿತುಕೊಳ್ಳಲು ಸಿದ್ಧರಿದ್ದೇವೆ.
-ಪರಿಮಳಾ ನಾಗಪ್ಪ, ಮಾಜಿ ಶಾಸಕಿ * ವಿನೋದ್ ಎನ್ ಗೌಡ