Advertisement

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

03:11 PM Aug 29, 2024 | Team Udayavani |

ಕೋಲಾರ: ಜಿಲ್ಲೆಯಲ್ಲಿರುವ ಒಟ್ಟು 3.40 ಲಕ್ಷ ಆದ್ಯತಾ ಪಡಿತರ ಚೀಟಿಗಳ ಪೈಕಿ 1.25 ಲಕ್ಷ ಪಡಿತರ ಚೀಟಿಗಳು ಅನರ್ಹಗೊಳ್ಳುವ ಭೀತಿ ಎದುರಿಸುತ್ತಿವೆ. ರಾಜ್ಯ ಸರ್ಕಾರವು ವಿವಿಧ ಭಾಗ್ಯಗಳನ್ನು ಆದ್ಯತಾ ವಲಯದ ಪಡಿತರ ಚೀಟಿಗಳ ಆಧಾರದ ಮೇಲೆಯೇ ವಿತರಿಸುತ್ತಿದ್ದು, ನಕಲಿ ಪಡಿತರ ಚೀಟಿಗಳ ಹಾವಳಿ ವಿಪರೀತವಾಗಿದೆ.

Advertisement

ಭಾಗ್ಯಗಳು ಉಳ್ಳವರಿಗೂ ಸೋರಿಕೆ ಯಾಗುತ್ತಿದೆ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ವಿವಿಧ ಮಾನದಂಡ ರೂಪಿಸಿ ಅದರ ಪ್ರಕಾರ ಅನರ್ಹಗೊಳ್ಳುವ ಪಡಿತರ ಚೀಟಿಗಳ ಪಟ್ಟಿ ತಯಾರಿಸಲು ಸೆಂಟರ್‌ ಫಾರ್‌ ಇ ಗೌವರ್ನೆಸ್‌ ಸಂಸ್ಥೆಗೆ ಕೋರಿತ್ತು. ಪಡಿತರ ಪಡೆಯದ, ಆದಾಯ ತೆರಿಗೆ ಪಾವತಿ ಸುವ, 1.20 ಲಕ್ಷಕ್ಕಿಂತಲೂ ಹೆಚ್ಚು ಆದಾಯ ಇರುವ ಕುಟುಂಬಗಳು ಮತ್ತು ವಿವಿಧ ಎಚ್‌ಆರ್‌ ಎಂಸ್‌, ಕೆಜಿಐಡಿಯೊಂದಿಗೆ ಜೋಡಣೆಯಾಗಿರುವ ಪಡಿತರ ಚೀಟಿಗಳನ್ನು ತಂತ್ರಾಂಶದ ಮೂಲಕ ಪತ್ತೆ ಹಚ್ಚಿ ಅನರ್ಹಗೊಳಿಸಲು ಕ್ರಮವಹಿಸಲಾಗಿತ್ತು. ಅದರಂತೆ ಸೆಂಟರ್‌ ಫಾರ್‌ ಇ ಗೌವರ್ನೆಸ್‌ ಅವರು ನೀಡಿರುವ ಅನರ್ಹ ಆದ್ಯತಾ ಪಡಿತರ ಚೀಟಿಗಳ ಪಟ್ಟಿಯ ಅನ್ವಯ ಕೋಲಾರ ಜಿಲ್ಲೆಯಲ್ಲಿ 1,25,627 ಪಡಿತರ ಚೀಟಿ ಅನರ್ಹವಾಗಲಿವೆ. ಜಿಲ್ಲೆಯಲ್ಲಿ 29,714 ಅಂತ್ಯೋದಯ ಹಾಗೂ 3,10,350 ಆದ್ಯತಾ ವಲಯದ ಕುಟುಂಬಗಳು ಸೇರಿ ಒಟ್ಟು 3.40 ಲಕ್ಷ ಆದ್ಯತಾ ಕುಟುಂಬಗಳಿದ್ದು, ಈಪೈಕಿ 1.25 ಲಕ್ಷ ಕುಟುಂಬಗಳು ವಿವಿಧ ಕಾರಣಗಳಿಗಾಗಿ ಅನರ್ಹಗೊಳ್ಳಲಿವೆ.

ತಾಲೂಕುವಾರು ಪಡಿತರ ಚೀಟಿ ವಿವರ: ಜಿಲ್ಲೆ ಯಲ್ಲಿ 29,713 ಅಂತ್ಯೋದಯ ಪಡಿತರ ಚೀಟಿಗಳಿವೆ. ಆದ್ಯತಾ ವಲಯದ 3,10,353 ಪಡಿತರ ಚೀಟಿಗಳಿವೆ. ಒಟ್ಟು 3.40 ಲಕ್ಷ ಆದ್ಯತಾ ವಲಯ ಕುಟುಂಬದ ಪಡಿತರ ಚೀಟಿಗಳು ಇವೆ. ಜಿಲ್ಲೆಯ ತಾಲೂಕುವಾರು ಅಂಕಿ-ಅಂಶಗಳ ಪ್ರಕಾರ ಬಂಗಾರಪೇಟೆಯಲ್ಲಿ 4,553 ಅಂತ್ಯೋದಯ ಹಾಗೂ 38,324 ಆದ್ಯತಾ ವಲಯ, ಕೋಲಾರದಲ್ಲಿ 6,325 ಅಂತ್ಯೋದಯ ಹಾಗೂ 75,255 ಆದ್ಯತಾ ವಲಯ, ಮಾಲೂರಿನಲ್ಲಿ 4,296 ಅಂತ್ಯೋದಯ ಹಾಗೂ 48,475 ಆದ್ಯತಾ ವಲಯ, ಮುಳಬಾಗಿಲಿನಲ್ಲಿ 4,977 ಅಂತ್ಯೋ ದಯ ಹಾಗೂ 58,870 ಆದ್ಯತಾ ವಲಯ, ಶ್ರೀನಿ ವಾಸಪುರದಲ್ಲಿ 5,422 ಅಂತ್ಯೋದಯ ಹಾಗೂ 43,282 ಆದ್ಯತಾ ವಲಯ ಹಾಗೂ ಕೆಜಿಎಫ್‌ ತಾಲೂಕಿನಲ್ಲಿ 4,140 ಅಂತ್ಯೋದಯ ಹಾಗೂ 43,147 ಆದ್ಯತಾ ವಲಯ ಪಡಿತರ ಚೀಟಿಗಳಿವೆ.

14,452 ಮಂದಿಗೆ ಆದ್ಯತೇತರ ಪಡಿತರ ಚೀಟಿ: ಇಡೀ ಜಿಲ್ಲೆಯಲ್ಲಿ 29,713 ಅಂತ್ಯೋದಯ ಪಡಿತರ ಚೀಟಿಗಳ ಪ್ರಯೋಜನವನ್ನು 1.17 ಲಕ್ಷ ಮಂದಿ ಪಡೆದುಕೊಳ್ಳುತ್ತಿದ್ದರೆ, ಆದ್ಯತಾ ವಲಯದ 3.10 ಲಕ್ಷ ಪಡಿತರ ಚೀಟಿಗಳ ಪ್ರಯೋಜನವನ್ನು 10.76 ಲಕ್ಷ ಮಂದಿ ಪಡೆದುಕೊಳ್ಳುತ್ತಿದ್ದಾರೆ. 2011 ಜನಗಣತಿ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 15.36 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಕೋಲಾರ ಜಿಲ್ಲಾದ್ಯಂತ ಕೇವಲ 14,452 ಮಂದಿ ಮಾತ್ರವೇ ಆದ್ಯತೇತರ ಪಡಿತರ ಚೀಟಿ ಹೊಂದಿದ್ದಾರೆ. ಈಗ ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳ ಪ್ರಕಾರ ಇನ್ನೂ 1.25 ಲಕ್ಷ ಕುಟುಂಬಗಳು ಆದ್ಯತಾ ವಲಯದ ಪಡಿತರ ಚೀಟಿ ಸ್ಥಾನಮಾನದಿಂದ ಆದ್ಯತೇತರ ಪಡಿತರ ಚೀಟಿ ಸ್ಥಾನಮಾನ ಹೊಂದಲಿದ್ದಾರೆ. ಆಗ ಒಟ್ಟಾರೆ, ಜಿಲ್ಲೆಯಲ್ಲಿ 1.50 ಲಕ್ಷ ಮಂದಿ ಆದ್ಯತೇತರ ಪಡಿತರ ಚೀಟಿದಾರರು ಇರುವಂತಾಗುತ್ತದೆ.

10 ದಿನ ಕಾಲಾವಕಾಶ: ಸೆಂಟರ್‌ ಫಾರ್‌ ಇ ಗೌವರ್ನೆಸ್‌ ಕುಟುಂಬ ತಂತ್ರಾಂಶದಿಂದ ಪಡೆದ ಅನರ್ಹ ಪಡಿತರ ಚೀಟಿಗಳ ಪರಿಶೀಲನೆಯನ್ನು 10 ದಿನಗಳೊಳಗಾಗಿ ಮುಕ್ತಾಯಗೊಳಿಸಿ ನೇರವಾಗಿ ಪಡಿತರ ಚೀಟಿ ಅನರ್ಹಗೊಳಿಸಿ ಇಲಾಖೆಯ ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Advertisement

ಅನರ್ಹಗೊಳ್ಳು ವ ಪಡಿತರ ಚೀಟಿಗಳು: ಜಿಲ್ಲೆಯಲ್ಲಿ ಪಡಿತರ ಪಡೆಯದೆ ಕೆವೈಸಿ ಮಾಡಿಸದ ಅನರ್ಹ 61,707 ಪಡಿತರ ಚೀಟಿ, ಆದಾಯ ತೆರಿಗೆ ಪಾವತಿ ಮಾಡುತ್ತಿರುವ 3,073 ಪಡಿತರ ಚೀಟಿ, 1.20 ಲಕ್ಷ ರೂ.ಗಿಂತಲೂ ಹೆಚ್ಚಿನ ಆದಾಯ ಹೊಂದಿರುವ 60,762 ಕುಟುಂಬ ಮತ್ತು ಎಚ್‌ಆರ್‌ಎಂಎಸ್‌, ಕೆಜಿಐಡಿ ಜೊತೆಗೆ ಜೋಡಣೆಯಾಗಿರುವ 85 ಪಡಿತರ ಚೀಟಿಗಳು ಇವೆ. ಒಟ್ಟಾರೆ 3.40 ಲಕ್ಷ ಪಡಿತರ ಚೀಟಿಗಳಲ್ಲಿ ಸರ್ಕಾರದ ಮಾನದಂಡಗಳ ಪ್ರಕಾರ 1.25 ಲಕ್ಷ ಪಡಿತರ ಚೀಟಿಗಳು ಆದ್ಯತಾ ವಲಯ ಪಡಿತರ ಚೀಟಿಯಿಂದ ಅನರ್ಹಗೊಳ್ಳಲಿವೆ.

ನಕಲಿ ಆದ್ಯತಾ ವಲಯದ ಪಡಿತರ ಚೀಟಿಗಳನ್ನು ಗುರುತಿಸಲು ಸರ್ಕಾರ ವಿವಿಧ ಮಾನದಂಡಗಳನ್ನು ನಿಗದಿಪಡಿಸಿ, ತಂತ್ರಾಂಶದ ನೆರವಿನಿಂದ ಮಾನದಂಡಗಳನ್ನು ಮೀರಿರುವ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಮುಂದಾಗಿತ್ತು. ಇದೀಗ ಕೋಲಾರ ಜಿಲ್ಲೆ ಸೇರಿದಂತೆ ಇಡೀ ರಾಜ್ಯಾದ್ಯಂತ ಅನರ್ಹಗೊಳ್ಳಲಿರುವ ಪಡಿತರ ಚೀಟಿಗಳ ಪಟ್ಟಿ ಲಭ್ಯವಾಗಿದ್ದು, ಈ ಪಟ್ಟಿಯನ್ನು ಮತ್ತೂಮ್ಮೆ ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ಆದ್ಯತಾ ವಲಯದ ಪಡಿತರ ಚೀಟಿಗಳ ಪಟ್ಟಿಯಿಂದ ಅನರ್ಹಗೊಳಿಸಲು ಇಲಾಖೆಗೆ ಸೂಚಿಸಿದೆ. ಇದರಿಂದ ಜಿಲ್ಲೆಯಲ್ಲಿ 1.25 ಲಕ್ಷ ಪಡಿತರ ಚೀಟಿಗಳು ಆದ್ಯತಾ ವಲಯದಿಂದ ಹೊರ ಬರುವ ಸಾಧ್ಯತೆ ಇದೆ. -ಆಸಿಫ್‌ ಪಾಷಾ, ಪಡಿತರ ಚೀಟಿದಾರರು, ಕೋಲಾರ

  ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next