Advertisement
ಏನಿದು ಶಾಲ್ಮಲೋತ್ಸವ?
Related Articles
Advertisement
ಹೀಗೆ ನಡೆಯುತ್ತದೆ ಶಾಲ್ಮಲೋತ್ಸವ
ಶಾಲ್ಮಲೋತ್ಸವ ದಿನದಂದು ಮಹಿಳಾ ಮಂಡಳಿ, ಭಜನಾ ಮಂಡಳಿಗಳಿಂದ ಭಜನೆ, ಹಾಡು, ನೃತ್ಯ ರೂಪಕ, ಗಂಗಾವತರಣ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಪ್ರತಿ ವರ್ಷ ಒಬ್ಬ ಸಂತರನ್ನು ಆಹ್ವಾನಿಸಿ, ಅವರಿಂದ ಆಶೀರ್ವಚನ ಪಡೆಯಲಾಗುತ್ತದೆ. ಜೊತೆಗೆ ಭಾರತೀಯ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಮುಂತಾದ ವಿಷಯಗಳ ಕುರಿತು ಉಪನ್ಯಾಸ ನಡೆಯುತ್ತದೆ.
ಇದರ ನಂತರ ನಡೆಯುವುದೇ ಶಾಲ್ಮಲೆಗೆ ಆರತಿ. ನಾರಿಯರು ಗಂಗಾದೇವಿಯ ಮೂರ್ತಿಯನ್ನು ನದಿಯ ಉಗಮ ಸ್ಥಾನಕ್ಕೆ ತರುತ್ತಾರೆ. ಅಲ್ಲೇ ಪಕ್ಕದಲ್ಲಿ ಶಿವನ ದೇವಸ್ಥಾನವಿದೆ. ದೇವರಿಗೆ ಪೂಜೆ ಮಾಡಿ, ನದಿಗೆ ಬಾಗಿನ ಅರ್ಪಿಸಲಾಗುತ್ತದೆ. ನಾಲ್ಕು ನಾರಿಯರು, ಮಧ್ಯದಲ್ಲಿ ಗಂಗಾದೇವಿ ವೇಷಧಾರಿಯೊಬ್ಬರು ನಿಂತಿರುತ್ತಾರೆ. ಶಂಖನಾದದೊಂದಿಗೆ ಶಾಲ್ಮಲೆಗೆ ಆರತಿ ಆರಂಭ. ಧೂಪಾರತಿಯಿಂದ ಆರಂಭವಾಗಿ ಒಂದಾದ ನಂತರ ಒಂದು ಐದು ಬಗೆಯ ಆರತಿಗಳನ್ನು ಬೆಳಗಲಾಗುತ್ತದೆ. ಏಕಕಾಲಕ್ಕೆ ಒಂದೇ ರೀತಿಯಲ್ಲಿ ನಾಲ್ಕೂ ಜನ ಆರತಿ ಬೆಳಗುತ್ತಾರೆ. ಗಂಟೆ, ಜಾಗಟೆಯ ಪ್ರತಿಧ್ವನಿಗಳು, ಭಕ್ತಿ ಸಂಗೀತದಿಂದ ಶಾಲ್ಮಲೆಯ ಆರತಿ ಕಂಗೊಳಿಸಿದರೆ, ಅದನ್ನು ಕಣ್ತುಂಬಿಕೊಳ್ಳಲು ಸೇರುವ ಸಾವಿರಾರು ಜನರು “ಗಂಗಾ ಮಾತಾ ಕೀ ಜೈ’, “ಜೈ ಶ್ರೀರಾಮ್’, “ಹರ್ ಹರ್ ಮಹಾದೇವ್’ ಎಂದು ಉದ್ಘೋಷ ಕೂಗುತ್ತಾರೆ. ಈ ಸಂಪೂರ್ಣ ನೋಟ ಕಣ್ಮನಕ್ಕೆ ಎಷ್ಟೊಂದು ಮುದ… ಭಕ್ತಿಭಾವ ಮೇಳೈಸಿದ ಆನಂದ!
ಸುಮಾರು ಮೂವತ್ತು ನಿಮಿಷಗಳ ಕಾಲ ನಡೆಯುವ ಆರತಿ, ನೋಡಿದ ಎಂಥವರನ್ನಾದರೂ ಮಂತ್ರಮುಗ್ಧ ಗೊಳಿಸುತ್ತದೆ. ಕಳೆದೆರಡು ವರ್ಷಗಳಿಂದ ಸಹಸ್ರ ಸಂಖ್ಯೆಯಲ್ಲಿ ಹುಬ್ಬಳ್ಳಿ-ಧಾರವಾಡ ಜನತೆ ಆಗಮಿಸಿ, ಶಾಲ್ಮಲೋತ್ಸವಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದಾರೆ.
ಶಾಲ್ಮಲೆಯ ಸೊಬಗು! :
ಶಾಲ್ಮಲಾ ಅತ್ಯಂತ ಪ್ರಾಚೀನ ನದಿ . ಅಗಸ್ತ್ಯ ಋಷಿ, ತನ್ನ ಪತ್ನಿ ಲೋಪಾಮುದ್ರೆಯೊಂದಿಗೆ ಇಲ್ಲಿ ಧ್ಯಾನ ಮಾಡಿ, ಶಿವಲಿಂಗ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ಬಳಿ ಶಾಲ್ಮಲಾ ನದಿ ಉಗಮವಾಗುತ್ತದೆ. ಇದರ ವಿಹಂಗಮ ನೋಟ ಕಾಣುವುದೆಲ್ಲ ಉತ್ತರ ಕನ್ನಡದ ಶಿರಸಿಯಲ್ಲಿ. ಶಾಲ್ಮಲಾ ಧಾರವಾಡದಲ್ಲಿ ಉಗಮವಾಗಿ ಮುಂದೆ ಬೇಡ್ತಿ ಉಪನದಿಯೊಂದಿಗೆ ಸಂಗಮವಾಗುತ್ತದೆ. ಕಲಘಟಗಿ ಮಾರ್ಗವಾಗಿ ಉತ್ತರ ಕನ್ನಡದಲ್ಲಿ ಒಟ್ಟು 161 ಕಿ.ಮೀ. ಹರಿದು, ಅರಬ್ಬೀ ಸಮುದ್ರ ಸೇರಿಕೊಳ್ಳು ತ್ತದೆ. ಶಾಲ್ಮಲಾ ನದಿ ಹರಿವಿನಲ್ಲಿ ಸೋಂದಾ, ಸಹಸ್ರಲಿಂಗ, ಮಾಗೋಡು ಜಲಪಾತ, ಶಿವಗಂಗಾ ಜಲಪಾತ, ಜೇನುಕಲ್ಲು ಗುಡ್ಡ ಮುಂತಾದ ಪ್ರವಾಸಿ ತಾಣಗಳನ್ನು ಕಾಣಬಹುದು. ನದಿಯ ಸ್ಮರಣೆಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ತನ್ನದೊಂದು ವಿದ್ಯಾರ್ಥಿ ನಿಲಯಕ್ಕೆ “ಶಾಲ್ಮಲಾ’ ಎಂದು ಹೆಸರಿಟ್ಟಿದೆ.
-ರಜನಿ ಕುಲಕರ್ಣಿ, ಧಾರವಾಡ