Advertisement

ವೈಶಾಲಿ ಜೈಶಾಲಿ! : ಬದುಕು ಬದಲಿಸಿದ ಅಡುಗೆ ಕಲೆ

09:22 AM Apr 11, 2019 | Hari Prasad |

ಕಾಲ ಎಷ್ಟೇ ಬದಲಾಗಿದ್ದರೂ, ಈಗಲೂ ಕೆಲವು ಹಳ್ಳಿಗಳಲ್ಲಿ ಹೆಣ್ಣು ಅಡುಗೆ ಮನೆಗೆ ಸೀಮಿತವಾಗಿ­ದ್ದಾಳೆ. ಮನೆಮಂದಿಗೆಲ್ಲಾ ಅಡುಗೆ ಮಾಡುತ್ತಾ, ಅವರ ಇಷ್ಟ-ಕಷ್ಟಗಳನ್ನು ನೋಡಿಕೊಳ್ಳುವುದೇ ಹೆಣ್ಣಿನ ಕೆಲಸ. ಅಂಥವರಲ್ಲಿ ವೈಶಾಲಿ ಸಂತೋಷ ಚೌಗಲೆ ಕೂಡಾ ಒಬ್ಬರು. ಆದರೆ ಅವರು ತನ್ನ ಪಾಲಿಗೆ ದಕ್ಕಿದ ಅಡುಗೆ ಮನೆಯ ವ್ಯಾಪ್ತಿಯನ್ನೇ ಹಿಗ್ಗಿಸಿಕೊಂಡು, ತನಗೆ ಗೊತ್ತಿರುವ ಅಡುಗೆಯ ಕಲೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.

Advertisement

30 ಜನರಿಗೆ ಊಟ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಬಳಿಯ ಕೊಗನಹಳ್ಳಿಯವರಾದ ವೈಶಾಲಿ, ನಾಲ್ಕು ವರ್ಷಗಳಿಂದ ಮೆಸ್‌ ನಡೆಸುತ್ತಿದ್ದಾರೆ. ಆಹಾರೋದ್ಯಮದ ಯಾವ ಲೆಕ್ಕಾಚಾರವನ್ನೂ ತಿಳಿಯದ ಇವರು, ಅಡುಗೆಯನ್ನಷ್ಟೇ ಬಲ್ಲರು. ಇವರ ಮೆಸ್‌ ಪ್ರತಿನಿತ್ಯ 30 ಜನರ ಹಸಿವು ನೀಗುತ್ತಿದೆ. ಕಡಿಮೆ ಬೆಲೆ, ಶುಚಿ-ರುಚಿಯ ಕಾರಣದಿಂದ ಜನಪ್ರಿಯತೆ ಗಳಿಸಿದೆ.


ಹತ್ತು ವರ್ಷಗಳ ಹಿಂದೆ ಗಂಡನ ಮನೆಗೆ ಬಂದ ವೈಶಾಲಿ, ಇತರೆ ಗೃಹಿಣಿಯರಂತೆ ಮನೆ-ಮಂದಿಗೆ ಅಡುಗೆ ಮಾಡುವುದರಲ್ಲೇ ಮುಳುಗಿ ಹೋಗಿದ್ದರು. ಆದರೆ, ಗಂಡನ ದುಡಿಮೆಯಿಂದಲೆ 6 ಜನರ ಹೊಟ್ಟೆ ತುಂಬ­ಬೇಕಿತ್ತು. ದಿನಗಳು ಕಳೆದಂತೆ, ಸಂಸಾರದ ಖರ್ಚು ಹೆಚ್ಚಿತು. ಗಂಡನ ದುಡಿಮೆಯ ಹಣ ಹೆಚ್ಚಲಿಲ್ಲ. ಆಗ, ಹೆಚ್ಚುವರಿಯಾಗಿ ನಾಲ್ಕು ಕಾಸು ಸಂಪಾದಿಸುವ ಉದ್ದೇಶದಿಂದ, ವೈಶಾಲಿಯವರು ಸಣ್ಣದೊಂದು ಮೆಸ್‌ ತೆರೆದರು. ಪ್ರಾರಂಭದಲ್ಲಿ ನಾಲ್ಕೈದು ಗ್ರಾಹಕರನ್ನು ಹೊಂದಿದ್ದ ಇವರ ಮೆಸ್‌ಗೆ ಈಗ ಪ್ರತಿದಿನವೂ 30 ಜನ ಊಟಕ್ಕೆ ಬರುತ್ತಾರೆ.

ವಾರಕ್ಕೊಮ್ಮೆ ಬಾಡೂಟ
ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ, ರೊಟ್ಟಿ, ಚಪಾತಿ, ಪಲ್ಯ, ಸಾಂಬಾರ್‌ ಮಾಡುತ್ತಾರೆ. ಮೆಸ್‌ನಲ್ಲಿ ವಾರಕ್ಕೊಂದು ಬಾರಿ ಮಾಂಸಾಹಾರದ ಅಡುಗೆಯೂ ಸಿಗುತ್ತದೆ. ಅಷ್ಟು ಜನರಿಗೆ ಅಡುಗೆ ಮಾಡುವುದರ ಜೊತೆಗೆ, ಮನೆಯ ಇತರೆ ಕೆಲಸ, ಮಕ್ಕಳ ಲಾಲನೆ-ಪಾಲನೆಯೂ ವೈಶಾಲಿಯವರದ್ದೇ. ಗಂಡ, ಅತ್ತೆ, ಮಾವ ಕೂಡಾ ನೆರವು ನೀಡುತ್ತಾರೆ. ತಿಂಗಳಿಗೆ ಸರಾಸರಿ 15 ಸಾವಿರ ರೂ. ಲಾಭ ಮಾಡಬಹುದು ಅನ್ನುತ್ತಾರೆ ವೈಶಾಲಿ.

ದಿನಾ 30 ಜನರಿಗೆ ಅಡುಗೆ ಮಾಡಬೇಕ್ರೀ. ಜೊತೆಗೆ, ಕುಟುಂಬವನ್ನೂ ನೋಡಿಕೊಳ್ಳಬೇಕು. ಸ್ವಲ್ಪ ಕಷ್ಟವಾಗುತ್ತೆ. ಆದರೆ, ಮನೆಯಲ್ಲೇ ಕುಳಿತು ದುಡಿಮೆ ಮಾಡ್ಬೋದು ಅನ್ನೋ ಖುಷಿಯೂ ಇದೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತಿರುವುದರಿಂದ ಇಡೀ ಕುಟುಂಬ ಸಂತೋಷವಾಗಿದೆ.
– ವೈಶಾಲಿ ಸಂತೋಷ ಚೌಗಲೆ

Advertisement

— ಸಂಗೀತಾ ಗ. ಗೊಂಧಳೆ

Advertisement

Udayavani is now on Telegram. Click here to join our channel and stay updated with the latest news.

Next