ಹಾಸನ: ಮುಂಬೈನಿಂದ ಹಾಸನಕ್ಕೆ ಕಾರಿನಲ್ಲಿ ಬಂದಿದ್ದ ಹೊಳೆನರಸೀಪುರದ ಒಂದೇ ಕುಟುಂಬದ ಮೂವರಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 17 ವರ್ಷದ (ಪಿ 1310) ವರ್ಷದ (ಪಿ 1311) ಬಾಲಕ ಹಾಗೂ 38 ವರ್ಷದ (ಪಿ 1312) ಮಹಿಳೆಗೆ ಸೋಂಕು ಕಾಣಿಸಿ ಕೊಂಡಿದೆ. ಈ ಮೂವರು ತಾಯಿ, ಮಗಳು ಮತ್ತು ಮಗ.
ಇವರನ್ನು ಜಿಲ್ಲೆಯ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಲಾಗಿದೆ ಎಂದು ಹೇಳಿದರು. ಮುಂಬೈನ್‌ನ ಅಂಧೇರಿ ಪ್ರದೇಶದಿಂದ ಮೇ 14ರಂದು ಇನೋವಾ ಕಾರಿನಲ್ಲಿ ಹೊಳೆನರಸೀಪುರಕ್ಕೆ 6 ಮಂದಿ ಬಂದಿದ್ದರು. ಇವರಲ್ಲಿ ಇಬ್ಬರು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಗೆ ತೆರಳಿದ್ದಾರೆ. ಉಳಿದ ನಾಲ್ವರ ಗಂಟಲು ದ್ರವ ಮಾದರಿ ಪಡೆದು ಜಿಲ್ಲೆಯ ತಟ್ಟೆಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೂರು ಜನರ ವರದಿ ಪಾಸಿಟಿವ್ ಬಂದಿದ್ದು, ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ. ಮತ್ತೂಬ್ಬರ ವರದಿ ಬರಬೇಕಿದೆ ಎಂದರು.
ಕೋವಿಡ್ 19 ಬಗ್ಗೆ ತೀವ್ರ ನಿಗಾ: ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಭವಿ ಸಮಿತಿ ರಚಿಸಲಾಗಿದೆ. ಸ್ಪೆಷಲಿಸ್ಟ್ ಗ್ರೂಪ್ ಮಾಡಲಾಗಿದೆ ಅಲ್ಲದೆ ರಾಜ್ಯದಲ್ಲಿ ಸೆಂಟ್ರಲ್ ಕಮಿಟಿ ಇದ್ದು, ಅಂತರ್ಜಾಲದ ಮೂಲಕ ರೋಗಿಗಳ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗು ತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ 19 ಬಗ್ಗೆ ಹೆಚ್ಚಿನ ನಿಗಾವಹಿಸಲಾಗುವುದು, ಹಾಸನ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಇರುವ ಎಲ್ಲಾ ಸೋಂಕಿತರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿರುವುದಾಗಿ ತಿಳಿಸಿದರು.
ವಲಸೆ ಕಾರ್ಮಿಕರಿಗೆ ನೆರವು: ಜಿಲ್ಲೆಯಿಂದ ವಾಸವಾಗಿದ್ದ ಮಧ್ಯಪ್ರದೇಶಕ್ಕೆ 166 ಜನ ಹಾಗೂ ಜಾರ್ಖಂಡ್‌ಗೆ 126 ಮಂದಿ ಕಾರ್ಮಿಕನ್ನು ಕಳುಹಿಸಲಾಗಿದೆ. ಬಿಹಾರಕ್ಕೆ ಹೋಗಲು ಜಿಲ್ಲೆಯಿಂದ ಹೆಚ್ಚಿನ ಕಾರ್ಮಿಕರ ಬೇಡಿಕೆ ಇದ್ದು, ಶೀಘ್ರದಲ್ಲಿ ಮತ್ತೂಂದು ರೈಲಿನ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆ ಯಿಂದ 600 ಮಂದಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಕಾರ್ಮಿಕರು ಬರುತ್ತಿದ್ದಾರೆ ಎಂದರು.
ಅಕ್ರಮ ಪ್ರವೇಶಕ್ಕೆ ತಡೆ: ರಾಜ್ಯ ಸರ್ಕಾರದ ನಿರ್ದೇಶನದಂತೆ ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರಿಗೆ ಹೊಸದಾಗಿ ಪಾಸ್ ನೀಡುವುದನ್ನು ಸ್ಥಗಿತ ಮಾಡಲಾಗಿದೆ. ಮಹಾ ರಾಷ್ಟ್ರ, ತಮಿಳುನಾಡು ಹಾಗೂ ಗುಜುರಾತ್ ರಾಜ್ಯದಿಂದ ಬರುವವರಿಗೆ ಸಂಪೂರ್ಣ ನಿಷೇಧ ಮಾಡಲಾಗಿದೆ. ರಾಜ್ಯದ ಗಡಿ ಭಾಗದಲ್ಲಿ ಸರ್ಕಾರ ಹೆಚ್ಚು ಬಿಗಿ ಮಾಡಿದೆ. ಈ ನಡುವೆಯೂ ಅಕ್ರಮವಾಗಿ ನುಸಳಿ ಬಂದವರನ್ನು ಪತ್ತೆ ಹಚ್ಚಲಾಗುವುದು, ಗ್ರಾಮ ಪಂಚಾಯಿತಿಯಿಂದ ಪ್ರತಿ ಗ್ರಾಮದಲ್ಲಿಯೂ ಸ್ವಯಂ ಸೇವಕರನ್ನು ನೇಮಿಸಿ ಮಾಹಿತಿ ಕಲೆಹಾಕಲಾಗುವುದು ಎಂದರು.
ಕೋವಿಡ್ 19 ಪರೀಕ್ಷೆಗೆ ಹೊಸ ಯಂತ್ರ: ಪಕ್ಕದ ಚಿಕ್ಕಮಗಳೂರು ಜಿಲ್ಲೆಯವರ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಹಾಸನದಲ್ಲೇ ಮಾಡ ಬೇಕಾಗಿರುವುದರಿಂದ ಹಾಸನಕ್ಕೆ ಮತ್ತೂಂದು ಹೊಸ ಯಂತ್ರ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿಮ್ಸ್ ನಿರ್ದೇಶಕ ಡಾ. ಬಿ.ಸಿ.ರವಿಕುಮಾರ್ ಬೇಡಿಕೆ ಇಟ್ಟಿದ್ದರು. ಹಾಗಾಗಿ ಈಗ ಜಿಲ್ಲೆಗೆ ಹೊಸ ಯಂತ್ರ ನೀಡಿದ್ದು ಕೋವಿಡ್ 19 ಪರೀಕ್ಷೆ ವೇಗವಾಗಿ ನಡೆಯಲಿದೆ ಎಂದು ಹೇಳಿದರು.