ಹುಬ್ಬಳ್ಳಿ: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಒಮ್ಮೇಲೆ ರದ್ದು ಪಡಿಸುವ ಬದಲು ಹಂತ-ಹಂತವಾಗಿ ಕಾರ್ಯರೂಪಕ್ಕೆ ತನ್ನಿ. ಈ ವರ್ಷವೂ ಪಿಒಪಿನಿಂದ ನಿರ್ಮಿತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಕೊಡಿ ಎಂದು ಹುಬ್ಬಳ್ಳಿ-ಧಾರವಾಡ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಿತಿಗಳ ಒಕ್ಕೂಟದವರು ಮಹಾಪೌರ ಹಾಗೂ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದರು.
ಇಲ್ಲಿನ ದಾಜಿಬಾನಪೇಟೆಯ ದುರ್ಗಾದೇವಿ ದೇವಸ್ಥಾನದಲ್ಲಿ ಬುಧವಾರ ಸಭೆ ನಡೆಸಿದ ನಂತರ ಮೆರವಣಿಗೆ ಮುಖಾಂತರ ಪಾಲಿಕೆಗೆ ಆಗಮಿಸಿ ಮಹಾಪೌರರು ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದ ಸದಸ್ಯರು, ಪುಣೆ ಮಹಾನಗರ ಪಾಲಿಕೆ, ಬೆಳಗಾವಿ, ಬಾಗಲಕೋಟೆ ಹಾಗೂ ಕೊಪ್ಪಳಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಹಾಗೆಯೇ ಅವಳಿನಗರದಲ್ಲಿ ಪರವಾನಗಿ ನೀಡಬೇಕೆಂದು ಒತ್ತಾಯಿಸಿದರು.
ಮುಂಬಯಿ, ಮಹಾರಾಷ್ಟ್ರ ಹಾಗೂ ಬೆಳಗಾವಿ ಹೊರತು ಪಡಿಸಿದರೆ ಅವಳಿ ನಗರದಲ್ಲಿ ಐತಿಹಾಸಿಕವಾಗಿ ಅಂದಾಜು 1.50 ಲಕ್ಷದಷ್ಟು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಸಾರ್ವಜನಿಕವಾಗಿಯೇ ಎರಡು ಸಾವಿರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅವಳಿ ನಗರದಲ್ಲಿ ಮಣ್ಣಿನ ಗಣಪ ನಿರ್ಮಿಸುವ ಕಲಾವಿದರ ಸಂಖ್ಯೆ ಅಂದಾಜು 30-40 ಇದೆ. ಅವರು 4-5 ಸಾವಿರ ಗಣೇಶ ಮೂರ್ತಿಗಳನ್ನು ನಿರ್ಮಿಸಬಹುದು.
ಇನ್ನು ಅಂದಾಜು 50 ಸಾವಿರ ಗಣೇಶ ಮೂರ್ತಿಗಳ ಕೊರತೆಯಾಗುತ್ತದೆ. ಜೊತೆಗೆ ದೊಡ್ಡ-ದೊಡ್ಡ ಮಣ್ಣಿನ ಗಣಪ ಮೂರ್ತಿ ತಯಾರಿಕೆ ಕಷ್ಟಕರ. ಅಲ್ಲದೆ ಮಣ್ಣಿನ ಗಣೇಶ ಮೂರ್ತಿ ಮೇಲೆ ಹೆಲೋಜನ್ ದೀಪದ ಬೆಳಕು ಬಿದ್ದರೆ ಹಾಗೂ ಸಾಗಾಟ ಸಂದರ್ಭದಲ್ಲಿ ಮೂರ್ತಿಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಭಾವೈಕ್ಯತೆಗೆ ಧಕ್ಕೆ ತರದೆ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಇನ್ನು ಎರಡು ವರ್ಷ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.
ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲದಕ್ಕೂ ಪಾಲನೆ ಮಾಡಬೇಕು. ಸಾರ್ವಜನಿಕ ಶಾಂತಿ ಸಭೆಗೆ ಎಲ್ಲ ಸಂಘಟನೆಯವರನ್ನು ಆಹ್ವಾನಿಸುವಂತೆ ಗಣೇಶೋತ್ಸವದ ಬಗ್ಗೆ ಸಭೆ ನಡೆಸುವಾಗ ಎಲ್ಲ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಮಂಡಳಗಳ ಸದಸ್ಯರನ್ನು ಆಹ್ವಾನಿಸಬೇಕು. ಸಭೆಯಲ್ಲಿ ಪಾಲ್ಗೊಂಡ ಎಲ್ಲ ಮಂಡಳದ ಮುಖಂಡರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಮಹಾಪೌರ ಡಿ.ಕೆ. ಚವ್ಹಾಣ ಮಾತನಾಡಿ, ಕಳೆದ ಬಾರಿ ತಾವೇ ಈ ವರ್ಷ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲ್ಲವೆಂದು ಭರವಸೆ ನೀಡಿದ್ದೀರಿ. ಅದಕ್ಕಾಗಿ ಈ ವರ್ಷ ಪಿಒಪಿ ಮೂರ್ತಿ ಪ್ರತಿಷ್ಠಾಪನೆ ರದ್ದು ಪಡಿಸಲಾಗಿದೆ.
ಈಗ ನಿಮ್ಮ ಮನವಿ ಪರಿಗಣಿಸಿ ಜಿಲ್ಲಾಧಿಕಾರಿ ಅವರಿಗೆ ಮನವರಿಕೆ ಮಾಡಲಾಗುವುದು. ಈ ಕುರಿತು ಮತ್ತೂಮ್ಮೆ ಸಭೆ ನಡೆಸಲಾಗುವುದು ಎಂದರು. ಮನೋಜ ಹಾನಗಲ್ಲ, ಡಿ. ಗೋವಿಂದರಾವ್, ವೆಂಕಟೇಶ ಮೇಸ್ತ್ರಿ, ಪಾಂಡು ಮೆಹರವಾಡೆ, ವೆಂಕಟೇಶ ಪೂಜಾರಿ, ರಾಜು ಮಾನೆ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿದ್ದರು.