ಮೈಸೂರು: ಪರಿಸರ ಸಂರಕ್ಷಣೆ ಮಾಡುವ ಸಲುವಾಗಿ ಸಾರ್ವಜನಿಕರು ಈ ಬಾರಿಯ ಗಣೇಶ ಚತುರ್ಥಿಯ ವೇಳೆ ಪ್ಲಾಸ್ಟರ್ ಆಪ್ ಪ್ಯಾರೀಸ್(ಪಿಒಪಿ)ನಿಂದ ತಯಾರಿಸಿರುವ ಗಣಪತಿಮೂರ್ತಿಗಳನ್ನು ಬಹಿಷ್ಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪಿಒಪಿ ಮತ್ತು ಬಣ್ಣಲೇಪಿತ ವಿಗ್ರಹಗಳ ನಿಷೇಧದ ಬಗ್ಗೆ ಹಾಗೂ ನಿಷೇಧಿತ ವಿಗ್ರಹಗಳ ಮಾರಾಟ ತಡೆಯುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪನೆ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಸಹಕರಿಸಿ: ಈ ಬಗ್ಗೆ ಅರಿವು ಮೂಡಿಸಲು ಎಲ್ಲಾ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು, ಸರ್ಕಾರಿ ಕಚೇರಿಯ ನೌಕರರು ಹಾಗೂ ಸಾರ್ವಜನಿಕರು ಸಹಕರಿಸಬೇಕಿದೆ. ಅಲ್ಲದೆ ಈ ಬಗ್ಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪಿಒಪಿ ಗಣೇಶ ವಶ: ಇದಲ್ಲದೆ ಜಿಲ್ಲೆಯ 16 ಕಡೆಗಳಲ್ಲಿ ವಿಶೇಷ ಪೊಲೀಸ್ ತಂಡದ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದು, ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡುವುದು ಅಥವಾ ಕೊಂಡೊಯ್ಯುತ್ತಿರುವುದು ಕಂಡು ಬಂದರೆ ಅವುಗಳನ್ನು ವಶಕ್ಕೆ ಪಡೆಯಲಾಗುವುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವ ಮೂಲಕ ಪರಿಸರಸ್ನೇಹಿ ಗಣೇಶಮೂರ್ತಿಗಳ ಪ್ರತಿಷ್ಠಾಪನೆ ಮುಂದಾಗಬೇಕಿದ್ದು, ಪರಿಸರಸ್ನೇಹಿ ಗಣೇಶನಮೂರ್ತಿ ಪ್ರತಿಷ್ಠಾಪನೆಯನ್ನು ಪೋ›ತ್ಸಾಹಿಸಲು ಜಿಲ್ಲಾಡಳಿತದಿಂದ ಭಿತ್ತಿಪತ್ರಗಳನ್ನು ಸಹ ಹೊರತರಲಾಗಿದೆ ಎಂದು ತಿಳಿಸಿದರು.
ಜಾಗೃತಿ ಮೂಡಿಸಲಾಗುವುದು: ಪರಿಸರ ನಿಯಂತ್ರಣ ಮಂಡಳಿ ನಗರ ವಿಭಾಗೀಯ ಪರಿಸರಾಧಿಕಾರಿ ಬಿ.ಎಂ. ಪ್ರಕಾಶ್ ಮಾತನಾಡಿ, ಪರಿಸರಕ್ಕೆ ಹಾನಿಯುಂಟು ಮಾಡಬಲ್ಲ ಪಿಒಪಿ ಅಥವಾ ಬಣ್ಣಲೇಪಿತ ಗಣೇಶನಮೂರ್ತಿಗಳ ಬಳಕೆಯನ್ನು ತಡೆಯಲು ಶಾಲಾ ಹಂತದಲ್ಲಿ ಮಕ್ಕಳಿಗೆ ಮಣ್ಣಿನ ಗಣಪತಿಮೂರ್ತಿಗಳ ಬಳಕೆಯ ಬಗ್ಗೆ ಅರಿವು ಮೂಡಿಸಬೇಕಿದೆ.
ಈ ಹಿನ್ನೆಲೆ ಪರಿಸರ ನಿಯಂತ್ರಣ ಮಂಡಳಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಜಿಲ್ಲಾಡಳಿತದ ಪ್ರಯತ್ನದಲ್ಲಿ ಕೈಜೋಡಿಸಬೇಕಿದ್ದು, ಶಾಲೆಗಳಿಗೆ ತೆರಳಿ ಭಿತ್ತಿಪತ್ರಗಳನ್ನು ಅಂಟಿಸಿ ಮಕ್ಕಳಿಗೆ ಪಿಒಪಿ ಗಣಪತಿಮೂರ್ತಿ ಬಳಕೆಯಿಂದ ಪರಿಸರದ ಮೇಲಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ಇದಕ್ಕೂ ಮುನ್ನ ಪರಿಸರಸ್ನೇಹಿ ಗಣಪತಿಮೂರ್ತಿಗಳನ್ನು ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊರತಂದಿರುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಪಾಲಿಕೆ ಆಯುಕ್ತ ಜೆ.ಜಗದೀಶ್, ನೆಹರು ಯುವಕೇಂದ್ರದ ಸಮನ್ವಯಾಧಿಕಾರಿ ನಟರಾಜು, ಪರಿಸರ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಉದಯ್‌ಕುಮಾರ್, ಗ್ರಾಮಾಂತರ ಪರಿಸರ ಅಧಿಕಾರಿ ಎಂ.ಜಿ.ಯತೀಶ್, ಮೈಸೂರು ಗ್ರಾಹಕರ ಪರಿಷತ್ ಕಾರ್ಯದರ್ಶಿ ಎಂ.ಜಿ.ಶೈಣೈ, ಪರಿಸರವಾದಿ ಜಯರಾಮಯ್ಯ ಇನ್ನಿತರರು ಹಾಜರಿದ್ದರು.