Advertisement

ಅಕಾಡೆಮಿಗಳು ಕಲೆ ಉನ್ನತಿಗೆ ಪೂರಕ

03:45 AM Jan 29, 2017 | Team Udayavani |

ಮಂಗಳೂರು: ಅಕಾಡೆಮಿಗಳು ಕಲೆ, ಸಾಹಿತ್ಯ ಸಂಸ್ಕೃತಿಯ ಉನ್ನತಿಗೆ ಪೂರಕವಾಗಿದ್ದು, ಯಕ್ಷ ಗಾನ ಬಯಲಾಟ ಅಕಾಡೆಮಿ ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮ ಸಂಘಟಿಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಹೇಳಿದರು. 

Advertisement

ಅವರು ಮಂಗಳೂರಿನ ಪುರಭವನದಲ್ಲಿ ಶನಿವಾರ ಜರಗಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2016ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಗೌರವ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
 
ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಗೆ ಆ ಕ್ಷೇತ್ರದಲ್ಲಿನ ತಜ್ಞರು, ಸಾಧಕರು ಅಧ್ಯಕ್ಷ ಹಾಗೂ ಸದಸ್ಯರಾಗಿ ನೇಮಕಗೊಳ್ಳುತ್ತಾ ಬರುತ್ತಿದ್ದಾರೆ. ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದ ಅವರು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ| ಎಂ. ಪ್ರಭಾಕರ ಜೋಶಿ ಹಾಗೂ ಗೌರವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. 

ಮುಖ್ಯ ಅತಿಥಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ತಲಿನೋ, ಪ್ರಶಸ್ತಿ ಪುರಸ್ಕೃತರ, ಕೃತಿ ಪರಿಚಯ ಮಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹಮ್ಮದ್‌ ಹನೀಫ್‌ ತ್ತೈಮಾಸಿಕ ಸಂಚಿಕೆ ಬಯಲಾಟ ಬಿಡುಗಡೆಗೊಳಿಸಿದರು. 

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಪ್ರಸ್ತಾವನೆಗೈದು, ಅಕಾಡೆಮಿ ಹಮ್ಮಿಕೊಂಡಿರುವ ವಿವಿಧ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು.

ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ|ಎಂ.ಎಲ್‌. ಸಾಮಗ, ಕೇರಳ ತುಳುಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಯರಾಮ ಮಂಚೆತ್ತಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್‌ ಅತಿಥಿಗಳಾಗಿದ್ದರು. ಅಕಾಡೆಮಿ ಸದಸ್ಯರಾದ ಪಿ. ಕಿಶನ್‌ ಹೆಗ್ಡೆ, ಕೆ.ಎಂ. ಶೇಖರ್‌, ಬಿ. ಗಣಪತಿ, ದತ್ತಾತ್ರೇಯ ಅರಳಿಕಟ್ಟೆ, ಬಿ.ಎಸ್‌. ಗುರುನಾಥ್‌, ತಾರಾನಾಥ ವರ್ಕಾಡಿ, ಉಪಸ್ಥಿತರಿದ್ದರು.

Advertisement

ರಿಜಿಸ್ಟ್ರಾರ್‌ ಎಸ್‌.ಎಚ್‌. ಶಿವರುದ್ರಪ್ಪ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ಶರವು ದೇವಸ್ಥಾನದಿಂದ ಪ್ರಶಸ್ತಿ ಪುರಸ್ಕೃತರ ಮತ್ತು ಕಲಾತಂಡಗಳ ಮೆರವಣಿಗೆ ನಡೆಯಿತು. ಯಕ್ಷ-ಗಾನ ವೈಭವ ವೈವಿಧ್ಯ, ತೆಂಕು ತಿಟ್ಟು ಕಲಾವಿದರಿಂದ “ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಜರಗಿತು 

ಪ್ರಶಸ್ತಿ ಪ್ರದಾನ
ಕರ್ನಾಟಕ ಯಕ್ಷಗಾನ ಅಕಾಡೆಮಿಯ 2016ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯನ್ನು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅವರಿಗೆ ಪ್ರದಾನ ಮಾಡಲಾಯಿತು. ಸುಬ್ರಾಯ ವೆಂಕಟ್ರಮಣ ಭಟ್ಟ ಗುಂಡಿಬೈಲ್‌, ಹೊನ್ನಾವರ (ಬಡಗುತಿಟ್ಟು ), ಗೋಪಾಲಕೃಷ್ಣ ಕುರುಪ್‌, ಬೆಳ್ತಂಗಡಿ (ತೆಂಕುತಿಟ್ಟು) ಹೆರಂಜಾಲು ಸುಬ್ಬಣ್ಣ ಗಾಣಿಗ, ಕುಂದಾಪುರ (ಬಡಗುತಿಟ್ಟು ), ಉಷಾರಾಣಿ ಬಳ್ಳಾರಿ (ಬಯಲಾಟ), ತುಕಾರಾಮ ಮಾರುತಿ ನಾಯಿಕ ಬೆಳಗಾವಿ ( ಸಣ್ಣಾಟ), ವಿಲಾಸಬಾಯಿ ಮಾಗೆಪ್ಪ ರಾಯನ್ನವರ ಜಮಖಂಡಿ (ಶ್ರೀಕೃಷ್ಣ ಪಾರಿಜಾತ), ಚಿಕ್ಕ ಚೌಡಯ್ಯ ನಾಯ್ಕ ಮೈಸೂರು ( ಮೂಡಲಪಾಯ), ನರಹರಿ ಶಾಸ್ತ್ರಿ, ಬೆಂಗಳೂರು (ಸೂತ್ರದ ಗೊಂಬೆಯಾಟ), ನಿಂಗಪ್ಪ ತೋರಣಕಟ್ಟೆ ಜಗಳೂರು (ಬಯಲಾಟ) ಹಾಗೂ ಶ್ರೀನಿವಾಸ ಸಾಸ್ತಾನ ಬೆಂಗಳೂರು (ಯಕ್ಷಗಾನ) ಅವರಿಗೆ ಗೌರವ ಪ್ರಶಸ್ತಿ ನೀಡಲಾಯಿತು. ಪಾರ್ತಿಸುಬ್ಬ ಪ್ರಶಸ್ತಿ 1 ಲಕ್ಷ ರೂ. ನಗದು ಹಾಗೂ ಗೌರವ ಪ್ರಶಸ್ತಿ ತಲಾ 50 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ ಹಾರ, ಶಾಲು ಫಲತಾಂಬೂಲವನ್ನು ಒಳಗೊಂಡಿದೆ.
 

Advertisement

Udayavani is now on Telegram. Click here to join our channel and stay updated with the latest news.

Next