Advertisement

‘ಪಳೆಯುಳಿಕೆಗಳ ಉಳಿವಿಗೆ ಆತ್ಮಾವಲೋಕನ ಅಗತ್ಯ’

03:20 AM Dec 21, 2018 | Karthik A |

ಮಹಾನಗರ: ಹಳೆಯ ಪಳೆಯುಳಿಕೆಗಳನ್ನು ಮುಂದಿನ ಜನಾಂಗಕ್ಕೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅತ್ಮಾವಲೋಕನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದ ನೆಲೆಯಲ್ಲಿ ಹೊರ ದೇಶವನ್ನು ಗುರುತಿಸುತ್ತಿದ್ದೇವೆ. ವಿದೇಶಗಳಲ್ಲಿನ ಅನೇಕ ಪಾರಂಪರಿಕ ನಗರಗಳು ಹಳೆಯ ಅಂತಸ್ತನ್ನು ಬಿಟ್ಟುಕೊಟ್ಟಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಹೇಳಿದರು. ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಮಂಗಳೂರು ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವತೋರಣ ಪುರಾತನ ಮಂಗಳೂರನ್ನು ವರ್ಣಕುಂಚದಲ್ಲಿ ಮಹಿಳಾ ಕಲಾವಿದರು ಅಭಿವ್ಯಕ್ತಗೊಳಿಸಿದ ಕಲಾಶಿಬಿರ, ನಗರದ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನಗರದಲ್ಲಿ ಇಂದು ಜ್ಯೋತಿ ವೃತ್ತದ ಬಳಿ ಇರುವ ಕಟ್ಟಡ, ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸೇರಿದಂತೆ ಕೆಲವೊಂದು ಪಾರಂಪರಿಕ ಕಟ್ಟಡಗಳು ಮಾತ್ರ ಉಳಿದಿವೆ. ಜೀವನಶೈಲಿ ಬದಲಾದಂತೆ ಕಟ್ಟಡಗಳು ಶಿಥಿಲವಾಗಿವೆ ಎಂದು ಕೆಡವುತ್ತಿದ್ದೇವೆ. ಈ ನಿಟ್ಟಿನಲ್ಲಿ ಪುನರ್‌ವಿಮರ್ಶೆ ಮಾಡಬೇಕಾದ ಅನಿವಾರ್ಯ ಇದೆ. ಪೂರ್ವಜರ ಚಿಂತನೆಗಳು ಮಾಯವಾಗುತ್ತಿವೆ. ನಗರಗಳು ಬೆಳೆದಂತೆ ನೂರಾರು ವರ್ಷಗಳ ಕಟ್ಟಡಗಳನ್ನು ರಾತ್ರೋರಾತ್ರಿ ಕೆಡವಲಾಗುತ್ತಿದೆ. ಇದರ ಬದಲು ಹಳೆಯ ಕಟ್ಟಡಗಳನ್ನು ಉಳಿಸಿ, ಹೊಸ ಕಟ್ಟಡಗಳನ್ನು ಕಟ್ಟಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಜಿ. ರಾಜೇಶ್‌, ಹಿರಿಯ ಕಲಾವಿದ ದಿನೇಶ್‌ ಹೊಳ್ಳ, ಕೋಟಿ ಪ್ರಸಾದ್‌ ಆಳ್ವ, ಗಣೇಶ್‌ ಸೋಮಯಾಜಿ, ಸೈಯದ್‌ ಆಸಿಫ್‌ ಅಲಿ, ಸಪ್ನಾ ನೊರೊನ್ಹಾ ಸಹಿತ ಚಿತ್ರ ಕಲಾವಿದರು ಉಪಸ್ಥಿತರಿದ್ದರು.


ಮುಕ್ತ ಪ್ರವೇಶ

ಚಿತ್ರಕಲಾ ಪ್ರದರ್ಶನದಲ್ಲಿ 1929ರಲ್ಲಿ ಕಂಡಂತೆ ಮಂಗಳೂರಿನ ಬೀದಿ, 1901ರಲ್ಲಿದ್ದ ಹಂಪನಕಟ್ಟೆಯ ದೃಶ್ಯ, 1850- 1897ರ ಅವಧಿಯ ಮಂಗಳೂರು ಬಂದರು, ಬಾವುಟಗುಡ್ಡೆಯಲ್ಲಿದ್ದ ಲೈಟ್‌ಹೌಸ್‌, ಅಂದಿನ ಮಂಗಳೂರು ಮಹಾನಗರ ಪಾಲಿಕೆ, ಹಳೆ ಲೈಟ್‌ಹೌಸ್‌, ಕ್ಲಾಕ್‌ ಟವರ್‌, ಸಂತ ಅಲೋಶಿಯಸ್‌ ಶಾಲೆ, ಜೀನತ್‌ ಭಕ್ಷ್ ಜುಮ್ಮಾ ಮಸೀದಿ, ರಥಬೀದಿಯ ಚಿತ್ರಣ, ಹಳೆಯ ಸಂತ ಆ್ಯಗ್ನೆಸ್‌ ಕಾಲೇಜು, ಬಾಸೆಲ್‌ ಮಿಶನ್‌, ಹಳೆ ಜಿಲ್ಲಾಧಿಕಾರಿ ಕಟ್ಟಡದ ಚಿತ್ರಣ ಸೇರಿ 15 ಕಲಾಚಿತ್ರಗಳನ್ನು  ಪ್ರದರ್ಶನಕ್ಕಿಡಲಾಗಿದೆ. ಎರಡು ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next